ಪ್ರವೀಣ್ ನೆಟ್ಟಾರು ಕೊಲೆ ಮತ್ತೊಬ್ಬ ಸೆರೆ

ಬೆಂಗಳೂರು,ಜೂ.೫-ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯು ಮುಂಬಯಿ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪರಾರಿಯಾಗುವ ವೇಳೆ ರಾಷ್ಟ್ರೀಯ ತನಿಖಾ ತಂಡ(ಎಸ್ ಐಟಿ)ದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ರಿಯಾಜ್ ಯೂಸಫ್ ಹಾರಳ್ಳಿಯನ್ನು ಮುಂಬಯಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಎನ್ ಐಎ ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಆರೋಪಿ ಯು ಮುಂಬಯಿ ವಿಮಾನ ನಿಲ್ದಾಣದಿಂದ ಪರಾರಿಯಾಗುವ ಯತ್ನದಲ್ಲಿದ್ದಾಗ ಖಚಿತ ಮಾಹಿತಿ ಪಡೆದು ಅಧಿಕಾರಿಗಳು ಬಂಧಿಸಿದ್ದಾರೆ.
ಇದಕ್ಕೂ ಮೊದಲು ವಿದೇಶದಲ್ಲೇ ಇದ್ದ ರಿಯಾಜ್, ನಾಪತ್ತೆಯಾಗಿರುವ ಅಬ್ದುಲ್ ರೆಹಮಾನ್ ಸೂಚನೆ ಪ್ರಕಾರ ಭಾರತಕ್ಕೆ ಮರಳಿದ್ದ. ಇತ್ತೀಚೆಗೆ ಬಂಧಿತನಾಗಿದ್ದ ಮುಸ್ತಫಾ ಪೈಚಾರ್ ಎಂಬ ಆರೋಪಿಗೆ ಸಕಲೇಶಪುರದಲ್ಲಿ ವಾಸ್ತವ್ಯ ಹೂಡಲು ಸಹಕರಿಸಿದ್ದ ಪ್ರಕರಣ ಸಂಬಂಧ ೧೯ನೇ ಆರೋಪಿಯಾಗಿದ್ದಾನೆ.
ಆರೋಪಿಗಳ ಬಂಧನ:
ದಕ್ಷಿಣ ಕನ್ನಡದ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು. ಹಾಸನ ಜಿಲ್ಲೆಯಲ್ಲಿ ಸುಳ್ಯ ಮೂಲದ ಮುಸ್ತಾಫ ಪೈಚಾರ್, ಸೋಮವಾರಪೇಟೆ ಮೂಲದ ಇಲಿಯಾಸ್ ಹಾಗೂ ಸಿರಾಜ್ ಬಂಧಿತರಾಗಿದ್ದರು, ಇವರಲ್ಲಿ ಮುಸ್ತಾಫನನ್ನು ಹಿಡಿದುಕೊಟ್ಟವರಿಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಎಂಬಲ್ಲಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ. ಆನೆಮಹಲ್‌ನ ಸಿರಾಜ್ ಎಂಬವರ ಬಳಿ ಮುಸ್ತಾಫ ಪೈಚಾರ್ ಹಾಗೂ ಇಲಿಯಾಸ್ ಕೆಲಸಕ್ಕೆ ಸೇರಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್‌ನನ್ನೂ ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ.
ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಮುಸ್ತಾಫನಿಗಾಗಿ ಎನ್‌ಐಎ ವರ್ಷಗಳಿಂದ ಹುಡುಕುತ್ತಿತ್ತು. ಸುಳ್ಯದ ಶಾಂತಿನಗರ ನಿವಾಸಿಯಾದ ಮುಸ್ತಾಫ ಪ್ರಕರಣದ ಎ೪ ಆಗಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಗಿದ್ದ ಆರೋಪಿಯನ್ನು ಎನ್ ಐಎ ಇನ್‌ಸ್ಪೆಕ್ಟರ್ ಷಣ್ಮುಗಂ ನೇತೃತ್ವದ ತಂಡ ಬಂಧಿಸಿದೆ.