
ಬೆಂಗಳೂರು, ಜು.29- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ದಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ- ಎನ್ಐಎಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪ್ರವೀಣ್ ಕುಟುಂಬದ ಸದಸ್ಯರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಸಾಂತ್ವಾನ ಹೇಳಿ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲೆ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು ಕೊಲೆ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಪ್ರವೀಣ್ ಹತ್ಯೆ ವ್ಯವಸ್ಥಿತವಾಗಿ ಆಗಿದೆ ಹಾಗೂ ಇದೊಂದು ಅಂತರರಾಜ್ಯ ವಿಚಾರವಾಗಿದೆ. ಡಿಜಿ, ಐಜಿ ಅವರ ಬಳಿ ಚರ್ಚಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸೂಚಿಸಲಾಗಿದೆ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮಾಹಿತಿ ಪಡೆದ ನಂತರ ಗೃಹ ಇಲಾಖೆ ಪತ್ರ ಬರೆಯಲಿದೆ. ಕೇರಳ ಗಡಿಯಲ್ಲಿ ಎರಡು ರಾಜ್ಯಗಳ ಸಂಪರ್ಕಿಸುವ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಚೆಕ್ ಪೋಸ್ಟ್ ಗಳನ್ನು ಹಾಕಲಾಗುವುದು ಎಂದಿದ್ದಾರೆ.
ಸೂಕ್ಷ್ಮ ಊರುಗಳಲ್ಲಿ ತಾತ್ಕಾಲಿಕ ಪೋಲಿಸ್ ಕ್ಯಾಂಪ್ಗಳು ತೆರೆಯುವ ಜೊತೆಗೆ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ತೆಗೆದುಕೊಳ್ಳಬೇಕು, ರಾತ್ರಿ ಗಸ್ತನ್ನು ಹೆಚ್ಚಿಸಬೇಕು ಹಾಗೂ ಕೆ.ಎಸ್.ಆರ್.ಪಿಯ ಮತ್ತೊಂದು ತುಕಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜಿಸಲು ಸೂಚಿಸಲಾಗಿದೆ ಎಂದರು.
ಸೂರತ್ಕಲ್ ಹತ್ಯೆಯ ಬಗ್ಗೆ ತನಿಖೆ:
ನಿನ್ನೆ ಸೂರತ್ಕಲ್ನಲ್ಲಿ ನಡೆದ ಹತ್ಯೆಯ ಬಗ್ಗೆಯೂ ತೀವ್ರಗತಿಯಲ್ಲಿ ತನಿಖೆಯಾಗಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಅವರು ಪೊಲೀಸರಿಗೆ ಸೂಚಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಧಾರ್ಮಿಕ ಮುಖಂಡರನ್ನ ಕರೆದು ಶಾಂತಿ ಸಭೆಗಳನ್ನು ಮಾಡುವ ನಡೆಸಲಾಗುವುದು ಎಂದು ತಿಳಿಸಿದ್ದಾರೆ