ಪ್ರವೀಣ್ ನೆಟ್ಟಾರು ಕೊಲೆ ಕೃತ್ಯ ಖಂಡನೀಯ : 1 ಕೋಟಿ ರೂ ಪರಿಹಾರ, ಪತ್ನಿಗೆ ಉದ್ಯೋಗಕ್ಕೆ ಡಾ. ಪ್ರಣವಾನಂದ ಸ್ವಾಮೀಜಿ ಆಗ್ರಹ

ಕಲಬುರಗಿ.ಜು.27: ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಶ್ರೀ ಪ್ರವೀಣ್ ನೆಟ್ಟಾರು ಅವರ ಕೊಲೆ ಕೃತ್ಯ ಖಂಡನೀಯವಾಗಿದ್ದು , ಪ್ರವೀಣ್ ಅವರ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು ಹಾಗೂ ಅವರ ಧರ್ಮಪತ್ನಿಗೆ ಸರ್ಕಾರಿ ನೌಕರಿಯನ್ನು ಘೋಷಿಸಬೇಕು ಎಂದು ಆರ್ಯ ಈಡೀಗ ರಾಷ್ಟ್ರೀಯ ಮಹಾಮಂಡಲದ ಅಧ್ಯಕ್ಷ ಡಾ. ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬಿಲ್ಲವ ಸಮುದಾಯದ ಕುಲಬಾಂಧವರು, ಗೆಜ್ಜೆಗಿರಿ ಕೋಟಿ ಚೆನ್ನಯ್ಯ ಕ್ಷೇತ್ರದ ಸಕ್ರಿಯ ಸೇವಾ ಕಾರ್ಯಕರ್ತರು, ಯುವ ವಾಹಿನಿ ಮುಖಂಡರು ಹಾಗೂ ರಾಜಕೀಯ ,ಸಾಮಾಜಿಕ ಕಾರ್ಯಕರ್ತರಾಗಿದ್ದ ಶ್ರೀ ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಪೂಜ್ಯ ಸ್ವಾಮೀಜಿಯವರು ಅತೀವ ದುಃಖವನ್ನು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯ ಬಿಲ್ಲವ ಸಮುದಾಯವರು ಈ ಘಟನೆಯನ್ನು ಒಕ್ಕೊರಳಿಂದ ತೀವ್ರವಾಗಿ ಖಂಡಿಸಬೇಕಾಗಿದೆ , ಈ ಘಟನೆಯಿಂದ ಎಚ್ಚೆತ್ತುಕೊಂಡು ಯಾವುದೇ ಪಕ್ಷದಲ್ಲಿದ್ದರೂ ಪ್ರಚೋದನೆಗೆ ಒಳಪಡದೆ ಪಕ್ಷದ ಸಿದ್ಧಾಂತದಂತೆ ಸಂಯಮದಿಂದ ಇರಬೇಕೆಂದು ಶ್ರೀಗಳು ಸೂಚಿಸಿದ್ದಾರೆ. ಈ ಹಿಂದಿನ ದಿನಗಳಲ್ಲಿ ಸಾಕಷ್ಟು ಬಿಲ್ಲವ ಯುವಕರು ಹತ್ಯೆಗೀಡಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಯಾವ ಒಬ್ಬ ಬಿಲ್ಲವ ಯುವಕನು ಕೂಡ ಈ ರೀತಿ ಕೊಲೆಯಾಗುವಂತಹ ಸನ್ನಿವೇಶ ಸೃಷ್ಟಿಯಾಗುವಂತೆ ಸಮುದಾಯದ ಜನ ಜಾಗೃತಿ ಮೂಡಿಸಬೇಕಾಗಿದೆ, ನಾವು ಬ್ರಹ್ಮಶ್ರೀ ನಾರಾಯಣ ಗುರುಗಳ ಅಹಿಂಸಾ ಸಿದ್ಧಾಂತದ ಹಾದಿಯಲ್ಲಿ ಮುಂದುವರಿಯಬೇಕೆಂದು ಎಂದು ಆರ್ಯ ಈಡೀಗ ರಾಷ್ಟ್ರೀಯ ಮಹಾಮಂಡಲದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಣಾವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.
ಇಂದು (ಜುಲೈ 28)ಮೃತ ಪ್ರವೀಣ್ ನೆಟ್ಟಾರು ಮನೆಗೆ ಸ್ವಾಮೀಜಿಯವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಇವರೊಂದಿಗೆ ಬಿಲ್ಲವ -ಈಡಿಗ ಸಮಾಜದ ಮುಂದಾಳುಗಳು ತೆರಳಲಿದ್ದಾರೆ.