ಪ್ರವೀಣ್ ಕೊಲೆ:ಎನ್ ಐಗೆ ಒಪ್ಪಿಸುವ ಸುಳಿವು ಕೊಟ್ಡ ಸಿಎಂ

ಬೆಂಗಳೂರು, ಜು.27-ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಪ್ರವೀಣ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ಗೆ ಒಪ್ಪಿಸುವ ವಿಚಾರದಲ್ಲಿ ಹಿಂದು ಮುಂದು ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ‌.
ಈ ಪ್ರಕರಣವನ್ನು ಎನ್ ಐಎಗೆ ಒಪ್ಪಿಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಎನ್ ಐಗೆ‌ ಒಪ್ಪಿಸುವ ಸುಳಿವು ನೀಡಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಪ್ರವೀಣ್ ಹತ್ಯೆಗೈದ ಹಂತಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಈಗಾಗಲೇ ಆದೇಶಿಸಿದ್ದೇನೆ. ಕೇರಳ ಪೊಲೀಸರ ಜತೆಗೂ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ ಎಂದರು.
ಆರೋಪಿಗಳ ಬಂಧನಕ್ಕಾಗಿ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ. ರಾಜ್ಯ ‌ಪೊಲೀಸ್ ಮಹಾ ನಿರ್ದೇಶಕರ ಜೊತೆ ಚರ್ಚಿಸಿದ್ಧೇನೆ ಎಂದ ಅವರು, ಶೀಘ್ರದಲ್ಲೇ ಆರೋಪಗಳನ್ನು ಬಂಧಿಸುತ್ತೇವೆ ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಹರ್ಷ ಹತ್ಯೆ, ಡಿಜೆ ಹಳ್ಳಿ ಗಲಭೆ ಪ್ರಕರಣ ಕುರಿತು ತಾವ ರೀತಿ ಕ್ರಮಕೈಗೊಂಡಿದ್ದೇವೇಯೋ ಅದೇ ರೀತಿ ಈ ಪ್ರಕರಣದಲ್ಲೂ ತೆಗೆದುಕೊಂಡಿದ್ದೇವೆ. ಈ ಹತ್ಯೆಯ ಹಿಂದೆ ಯಾವುದೇ ವ್ಯಕ್ತಿ ಮತ್ತು ಸಂಘಟನೆಗಳಿರಲಿ ಸದೆ ಬಡಿಯುವ ಕೆಲಸ ಮಾಡುತ್ತೇವೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಇಂತಹ ದುಷ್ಕೃತ್ಯಗಳನ್ನು ಹತ್ತಿಕ್ಕುವ ತನಕ ತಾವು ವಿರಮಿಸುವುದಿಲ್ಲ. ಯಾರೂ ಆವೇಶಕ್ಕೆ ಒಳಗಾಗಬಾರದು. ಪ್ರಚೋದನಕಾರಿ ಹೇಳಿಕೆ ನೀಡದೆ ಶಾಂತಿ ಕಾಪಾಡಬೇಕೆಂದು ಅವರು ಮನವಿ ಮಾಡಿದರು.