ಪ್ರವಾಹ ಸ್ಥಿತಿ ಸಮರ್ಪಕ ನಿರ್ವಹಣೆಗೆ ಸಕಲ ಕ್ರಮಗಳು ಕೈಗೊಳ್ಳಿ:ಜಿಲ್ಲಾಧಿಕಾರಿ

ಬಳ್ಳಾರಿ, ಜೂ.11 : ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು,ಕಳೆದ ವರ್ಷದಂತೆ ಈ ವರ್ಷವೂ ಪ್ರವಾಹ ಸ್ಥಿತಿ ಎದುರಾಗುವ ಸಾಧ್ಯತೆ ಇದ್ದು,ಪ್ರವಾಹ ಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಪ್ರವಾಹ ಮತ್ತು ಅತಿವೃಷ್ಟಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಚರ್ಚೆ ನಡೆಸಿ ಅವರು ಮಾತನಾಡಿದರು.
ತುಂಗಾ ಮತ್ತು ಭದ್ರಾ ಜಲಾಶಯದ ನೀರನ್ನು ಹೆಚ್ಚುವರಿಯಾಗಿ ನದಿಗೆ ಹರಿಸಿದಾಗ ಹಾಗೂ ತುಂಗಾಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ ನೀರು ನದಿಗೆ ಹರಿಸಿದ ಸಂದರ್ಭದಲ್ಲಿ ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಪ್ರಸ್ತುತ ತುಂಗಾಭದ್ರಾ ನದಿ ಪಾತ್ರದಲ್ಲಿ ಅಂದರೇ ಸಿರಗುಪ್ಪದಲ್ಲಿ 10,ಕಂಪ್ಲಿ-1,ಹೊಸಪೇಟೆ-2,ಹಡಗಲಿ-16,ಹರಪನಹಳ್ಳಿ-03 ಹಳ್ಳಿ?ಖುಗಳು ಸೇರಿದಂತೆ 32ಹಳ್ಳಿಗಳು ಅಪಾಯಕ್ಕೆ ಒಳಪಡುವ ಸಾಧ್ಯತೆ ಇದ್ದು, ಸಂಬಂಧಿಸಿದ ಸಹಾಯಕ ಆಯುಕ್ತರು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು ಮತ್ತು ಅಗತ್ಯ ಸಿದ್ಧತಾ ಕ್ರಮಗಳು ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
32ಕಾಳಜಿ ಕೇಂದ್ರಗಳ ಸ್ಥಾಪನೆ:
ಸೊಂಕಿತರಿಗೂ ಪ್ರತ್ಯೇಕ ಕೇಂದ್ರಗಳ ಸ್ಥಾಪನೆ: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಗ್ರಾಮದ ಜನರನ್ನು ತಾತ್ಕಾಲಿಕವಾಗಿ ಸ್ಥಳೀಯ ಶಾಲಾ ಕಟ್ಟಡ ಅಥವಾ ಸಾರ್ವಜನಿಕ ಕಟ್ಟಡಗಳಿಗೆ ಸ್ಥಳಾಂತರಿಸಿ ಅಗತ್ಯ ಊಟೋಪಚಾರ ಹಾಗೂ ಆರೈಕೆ ಮಾಡುವ ಸಲುವಾಗಿ 32ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕೋವಿಡ್ ಸೊಂಕಿತರಿಗೆ ಈ 32 ಗ್ರಾಮಗಳಲ್ಲಿಯೂ ಪ್ರತ್ಯೇಕ ಕಾಳಜಿ ಕೇಂದ್ರಗಳನ್ನು ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಮಾಲಪಾಟಿ ಅವರು ಸೂಚನೆ ನೀಡಿದರು.
ಈ ಎಲ್ಲ ಕಾಳಜಿ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲು ಸೂಚಿಸಿದ ಡಿಸಿ ಮಾಲಪಾಟಿ ಅವರು ಪ್ರವಾಹ ಪರಿಸ್ಥಿತಿ ಎದುರಾಗುವ ತಾಲೂಕುಗಳಿಗೆ ಅಗತ್ಯ ಸಿದ್ಧತೆಗಳು ಮತ್ತು ಸ್ಪಂದಿಸಲು
ತಲಾ 10ಲಕ್ಷ ರೂ.ಬಿಡುಗಡೆ ಮಾಡಲಾಗಿದೆ.ಇನ್ನೂ ಏನಾದರೂ ಅಗತ್ಯತೆಗಳು ಇದ್ದಲ್ಲಿ ತಿಳಿಸಿ ಎಂದರು.
ಜನ-ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಬೋಟ್ ಗಳು ಸಿದ್ದಪಡಿಸಿಟ್ಟುಕೊಳ್ಳಿ:
ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ರಬ್ಬರ್ ಬೋಟ್ ಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಡಿಸಿ ಮಾಲಪಾಟಿ ಅವರು ಪ್ರವಾಹ ಸ್ಥಿತಿ ಉದ್ಭವಿಸುವ ಗ್ರಾಮಗಳಲ್ಲಿನ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದರು.
ಪ್ರವಾಹದ ಸಂದರ್ಭದಲ್ಲಿ ಜಾನುವಾರುಗಳ ಶಿಬಿರಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಸೂಕ್ತ ಕ್ರಿಯಾಯೋಜನೆ ರೂಪಿಸಿ ಎಂದು ಹೇಳಿದ ಡಿಸಿ ಅವರು ಅತಿಹೆಚ್ಚು ಮಳೆಯಾದ ಸಂದರ್ಭದಲ್ಲಿ ಹಾಗೂ ಪ್ರವಾಹ ಎದುರಾದ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಗತ್ಯ ಸಲಹೆ-ಸೂಚನೆ ನೀಡಿದರು.
ಮಳೆಗಾಲ ಆರಂಭವಾಗುತ್ತಿರುವುದರಿಂದ ಮಲೇರಿಯಾ,ಡೆಂಘಿ ಹಾಗೂ ಇನ್ನೀತರ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆಗಳಿದ್ದು ಜಿಲ್ಲೆಯಲ್ಲಿರುವ ಎಲ್ಲ ಕೊಳಗೇರಿಗಳಲ್ಲಿ ಆರೋಗ್ಯ ತಪಾಸಣಾ ನಡೆಸುವಂತೆ ಡಿಎಚ್‍ಒ ಅವರಿಗೆ ಡಿಸಿ ಮಾಲಪಾಟಿ ಅವರು ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ಆದ ಮಳೆಯ ವಿವರ,ಕೃಷಿಯ ಮುಂಗಾರು ಹಂಗಾಮಿನ ಬಿತ್ತನೆ ಪ್ರಗತಿ, ರಸಗೊಬ್ಬರ ಬೇಡಿಕೆ ಹಾಗೂ ದಾಸ್ತಾನು ವಿವರ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಪ್ರೋಬೆಷನರಿ ಐಎಎಸ್ ಅನ್ಮೋಲ್ ಜೈನ್, ಸಹಾಯಕ ಆಯುಕ್ತರಾದ ರಮೇಶ್ ಕೊನರೆಡ್ಡಿ,ಸಿದ್ದರಾಮೇಶ್ವರ,ಚಂದ್ರಶೇಖರಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.