ಪ್ರವಾಹ-ಶಾಶ್ವತ ಪರಿಹಾರಕ್ಕೆ ಸಿಎಂ ಸೂಚನೆ

ಬೆಂಗಳೂರು,ಜೂ. ೩- ಬೆಂಗಳೂರು ನಗರದಲ್ಲಿ ಮಳೆ ವಿಕೋಪ ತಡೆಯಲು ೨೦೯ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ
ಶಾಶ್ವತ ಪರಿಹಾರ ರೂಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂಗಾರು ಮಳೆ ಆರಂಭವಾಗಿರುವ ಹಿನ್ನಲೆಯಲ್ಲಿ ಮಳೆ ವಿಕೋಪ ತಡೆಯಲು ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಮ್ಮ ಕಚೇರಿ ಕೃಷ್ಣಾದಲ್ಲಿಂದು ಸಚಿವರು ಹಾಗೂ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಳೆ ಸಂದರ್ಭದಲ್ಲಿ ಯಾವುದೇ ಅನಾಹುತಗಳಾಗದಂತೆ ಎಚ್ಚರ ವಹಿಸಿ ಎಂದು ಸೂಚನೆ ನೀಡಿದರು.
ಮಳೆಯಿಂದ ತೊಂದರೆಗೊಳಗಾಗುವ ೨೦೯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸ್ಥಳಗಳಲ್ಲಿ ಶಾಶ್ವತ ಪರಿಹಾರ ರೂಪಿಸುವಂತೆಯೂ ಸೂಚನೆ ನೀಡಿದರು.
ರಸ್ತೆ ಬದಿಯ ಚರಂಡಿಗಳು, ಅಡ್ಡ ಮೋರಿಗಳ ಹೂಳು ತೆಗೆದು ಮಳೆ ನೀರು ಸರಾಗವಾಗಿ ರಾಜಕಾಲುವೆಗಳ ಮೂಲಕ ಕೆರೆಗಳಿಗೆ ತಲುಪುವಂತೆ ನೋಡಿಕೊಳ್ಳಿ. ರಾಜಕಾಲುವೆ ಸಂಪರ್ಕಿಸುವ ಚರಂಡಿಗಳನ್ನು ಗುರುತಿಸಿ ಅವುಗಳನ್ನು ಸುಸ್ಥಿತಿಯಲ್ಲಿಡಿ ಎಂದು ಹೇಳಿದರು.
ರಾಜಕಾಲುವೆಗಳ ಮೂಲಕ ಮಳೆ ನೀರು ಕೆರೆಗಳಿಗೆ ಹರಿಯುವಂತೆ ಮಾಡುವುದರಿಂದ ಪ್ರವಾಹ ತಪ್ಪಿಸಬಹುದು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿ ರಾಜಕಾಲುವೆಗಳ ಪ್ರದೇಶಗಳ ವಾರ್ಷಿಕ ನಿರ್ವಹಣೆಗೆ ಹೆಚ್ಚಿನ ಕ್ರಮವಹಿಸಿ ಎಂದು ಸೂಚಿಸಿದರು.
ಮಳೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ೧೦೯ ಪ್ರದೇಶಗಳು ಪ್ರವಾಹಕ್ಕೆ ಒಳಗಾಗುತ್ತವೆ ಎಂದು ಗುರುತಿಸಲಾಗುತ್ತದೆ.
ಇವುಗಳಲ್ಲಿ ೫೮ ಅತಿಸೂಕ್ಷ್ಮ, ೧೫೧ ಸೂಕ್ಷ್ಮ ಪ್ರದೇಶಗಳು ಸೇರಿದ್ದು, ಈ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ಸೂಚಿಸಿದರು.
ಬೆಂಗಳೂರಿನಲ್ಲಿ ಮಳೆ ವಿಕೋಪ ತಡೆಯಲು ೮ ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, ೬೩ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ದಿನದ ೨೪ ಗಂಟೆಯೂ ಈ ಕೊಠಡಿಗಳು ಕಾರ್ಯನಿರ್ವಹಿಸಲಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
ದೊಡ್ಡ ಕಾಲುವೆಗಳಲ್ಲಿ ೨೬ ವಾಟರ್ ಲೆವೆಲ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಬೆಂಗಳೂರು ಮೇಘ ಸಂದೇಶ ಆಪ್‌ನಲ್ಲಿ ಮಳೆಯ ಪ್ರಮಾಣದ ಮಾಹಿತಿ, ನೀರು ಸಂಗ್ರಹವಾಗಿರುವ ಸ್ಥಳಗಳು, ಜನರಿಗೆ ಸುರಕ್ಷಿತ ಮಾರ್ಗ ಬಳಕೆ ಎಲ್ಲದರ ಬಗ್ಗೆಯೂ ಮಾಹಿತಿ ಲಭ್ಯವಿರಲಿದೆ ಎಂದರು.
ಈ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಸ್ವತ್ಥ ನಾರಾಯಣ, ಸಚಿವರುಗಳಾದ ಆರ್. ಅಶೋಕ್, ವಿ. ಸೋಮಣ್ಣ, ಅರವಿಂದ ಲಿಂಬಾವಳಿ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಗೋಪಾಲಯ್ಯ, ಬಿಬಿಎಂಪಿ ಅಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.