ಕೊಡಗಿನಲ್ಲಿ ಮತ್ತೆ ಭೂಕಂಪನ ಜನರಲ್ಲಿ ಆತಂಕ

ಕೊಡಗು,ಜು.೧೫- ಮಂಜಿನ ನಗರಿ ಕೊಡಗಿನಲ್ಲಿ ವರುಣನ ಆರ್ಭಟ ಒಂದೆಡೆಯಾದರೆ, ಮತ್ತೊಂದೆಡೆ ಜನತೆಯನ್ನು ಭೂಕಂಪನ ಬಿಟ್ಟು ಬಿಡದೆ ಕಾಡುತ್ತಿದೆ. ಇಂದು ಬೆಳಿಗ್ಗೆ ೧೦ ಗಂಟೆ ೧೦ ನಿಮಿಷದಲ್ಲಿ ಚೆಂಬು, ಪೆರಾಜೆ, ಗೂನಡ್ಕಾ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಮಿ ಕಂಪಿಸುತ್ತಿದ್ದಂತೆ ಜನರು ಭಯಭೀತರಾಗಿ ಓಡಿ ಬಂದಿದ್ದಾರೆ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಭೂಕುಸಿತದ ಜತೆಗೆ ಭೂಕಂಪನವಾಗುತ್ತಿರುವುದು ಜನರನ್ನು ಮತ್ತಷ್ಟು ಭೀತಿಗೆ ತಳ್ಳಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಪ್ರದೇಶ ಹಲವೆಡೆ ಭಾನುವಾರ ಭೂಮಿ ಕಂಪಿಸಿತ್ತು.
ಕಲ್ಲುಗುಂಡಿ ಮಠದ ಮೂಲೆ ಸಮೀಪ ತಾಜುದ್ದೀನ್‌ಟರ್ಲಿ ಅವರ ಮನೆಯ ಹಿಂಭಾಗ ಭೂಕಂಪ ಸಂಭವಿಸಿದ ವೇಳೆ ಭೂಮಿ ಬಿರುಕುಬಿಟ್ಟಿದೆ. ಮನೆಯೂ ಕುಸಿದು ಬೀಳುವ ಆತಂಕ ಎದುರಾಗಿದೆ. ಕೊಡಗಿನ ಗಡಿಗ್ರಾಮ ಚೆಂಬುವಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿ ಕಂಪಿಸುವ ಅನುಭವವಾಗಿದೆ.
ಮೊನ್ನೆಯಷ್ಟೇ ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಭೂಕಂಪನ ಸಂಭವಿಸಿರುವ ಪ್ರದೇಶಗಳಲ್ಲಿ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೆ ಇಂದು ಮತ್ತೆ ಭೂಮಿ ಕಂಪಿಸಿದೆ.
ಮಳೆಯ ಜತೆಗೆ ಭೂಕಂಪನವಾಗುತ್ತಿರುವುದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಕೃತಿ ವಿಕೋಪದಿಂದಾಗಿ ಯಾವುದೇ ಸಮಯದಲ್ಲೂ ಅನಾಹುತ ಸಂಭವಿಸಬಹುದೆಂಬ ಭೀತಿಯಿಂದಲೇ ಈ ಗ್ರಾಮದ ಗ್ರಾಮಸ್ಥರು ದಿನ ಕಳೆಯುವಂತಾಗಿದೆ. ಈ ಹಿಂದೆಯೂ ೧೦ ಬಾರಿ ಈ ಭಾಗಗಳಲ್ಲಿ ಭೂಮಿ ಕಂಪಿಸಿತ್ತು.