ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ಸಮನ್ವಯದಿಂದ ನಿರ್ವಹಿಸಿ: ಜಿಲ್ಲಾಧಿಕಾರಿ

ಗದಗ, ಸೆ7: ಜಿಲ್ಲಾದ್ಯಂತ ಅತಿಯಾದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಈ ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಿಭಾಯಿಸುವಂತೆ ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತಿಯಾದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಸ್ತೆ , ಕೆರೆ, ಕಟ್ಟಡ, ಮನೆ, ಬೆಳೆ ಹಾನಿಗೊಳಗಾಗಿವೆ. ಅವುಗಳನ್ನು ಎಸ್.ಡಿ.ಆರ್.ಎಫ್. ಹಾಗೂ ಎನ್.ಡಿ.ಆರ್.ಎಫ್.ಮಾರ್ಗಸೂಚಿಗಳನ್ವಯ ಸಮೀಕ್ಷೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.
ತಾಲೂಕಾಡಳಿತಗಳು ಪ್ರವಾಹ ಪರಿಸ್ಥಿತಿಯನ್ನು ಅಗ್ನಿಶಾಮಕ ಇಲಾಖೆ, ಪೆÇಲೀಸ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿವಿಧ ಹಂತದ ಅಧಿಕಾರಿ ಸಿಬ್ಬಂದಿಗಳ ಸಮನ್ವಯತೆಯೊಂದಿಗೆ ನಿರ್ವಹಿಸಬೇಕು. ಎಲ್ಲ ನೌಕರರು ಕೇಂದ್ರ ಸ್ಥಾನದಲ್ಲಿದ್ದು ಪ್ರವಾಹ ಪರಿಸ್ಥಿತಿ ನಿಭಾವಣೆಗೆ ಸಿದ್ಧರಿರುವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ. ಮಾತನಾಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆಯಿಂದಾಗಿ ಕಟ್ಟಿದ ಚರಂಡಿಗಳ ಸ್ವಚ್ಛತೆ ಮಾಡುವುದರ ಮೂಲಕ ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಬೇಕು. ಪ್ರವಾಹಕ್ಕೆ ತುತ್ತಾದ ಕುಟುಂಬಗಳನ್ನು ಹತ್ತಿರದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಇರುವಂತೆ ನಿಯೋಜಿತ ನೋಡಲ್ ಅಧಿಕಾರಿಗಳು ಕ್ರಮ ವಹಿಸಬೇಕು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಡಿಡಿಪಿಐ ಬಸವಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಕೃಷಿ ಇಲಾಖೆಯ ಉಪನಿರ್ದೇಶಕ ಕರಿಯಪ್ಪ , ಆಹಾರ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ, ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಲ್ಲೇದ ಸೇರಿದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಆಯಾ ತಾಲೂಕಾ ತಹಶೀಲ್ದಾರರು , ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

  ಸಭೆಗೂ ಮುನ್ನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಹದಿಂದಾಗಿರುವ ಹಾನಿ ಕುರಿತು ಅವಲೋಕಿಸಲು ಕ್ಷೇತ್ರ ಭೇಟಿ ನಡೆಸಿದರು. ಲಕ್ಷ್ಮೇಶ್ವರ ನಗರ , ಹೊಂಬಳದಲ್ಲಿನ ಬೆಳೆ ಹಾಗೂ ಮನೆ ಹಾನಿ, ಹಿರೇಹಂದಿಗೋಳದಲ್ಲಿನ ರಸ್ತೆಹಾನಿ, ಕುರ್ಲಗೇರಿ ಕೊಣ್ಣೂರು ಗ್ರಾಮಗಳಲ್ಲಿನ ಪ್ರವಾಹದಿಂದಾದ ಹಾನಿ ವೀಕ್ಷಿಸಿ ಸ್ಥಳೀಯ ಹಂತದ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಸಮರ್ಥ ನಿರ್ವಹಣೆಗೆ ನಿರ್ದೇಶನ ನೀಡಿದರು.