ಪ್ರವಾಹ ಪರಿಸ್ಥಿತಿ ಎದುರಿಸಲು ಹಣದ ಕೊರತೆಯಿಲ್ಲ-ಪರಿಹಾರಕ್ಕೂ ಸಿದ್ಧತೆ

ರಾಯಚೂರು.ಜು.೧೪- ನಗರದಲ್ಲಿ ಕಲುಷಿತ ನೀರಿನಿಂದ ಏಳು ಜನ ಮೃತಪಟ್ಟ ಘಟನೆ ದೇಶದಲ್ಲಿಯೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು, ಇಂತಹ ಘಟನೆ ಮತ್ತೆ ಮರುಕಳುಹಿಸದಂತೆ ನಗರಸಭೆ, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಘಟನೆ ನಡೆದ ನಂತರ ಅಧಿಕಾರಿಗಳನ್ನು ಅಮಾನತು ಮತ್ತು ವರ್ಗಾವಣೆ ಮಾಡಲಾಗಿದೆ. ಆದರೆ, ಇರುವಂತಹ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಕುಡಿವ ನೀರು ವಿಷಯದಲ್ಲಿ ಮಾನವಿಯತೆ ಆಧಾರದಲ್ಲಿ ಕೆಲವೆಡೆ ಕಾಮಗಾರಿ ಕೈಗೊಳ್ಳಬೇಕಾಗುತ್ತದೆ. ಆದರೆ, ಎಲ್ಲಿಯೂ ಸಹ ನೀತಿ ನಿಯಮ ಉಲ್ಲಂಘನೆಯಾಗಬಾರದು. ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಅಧಿಕಾರಿಗಳು ಸ್ಥಳದಲ್ಲಿಯೆ ಇದ್ದು ಪರಿಸ್ಥಿತಿ ನಿಗಾವಹಿಸಬೇಕು. ಇಂತಹ ತುರ್ತು ಸಮಯದಲ್ಲಿ ಅಧಿಕಾರಿಗಳು ಊರಿಗೆ ಹೋಗಿದ್ದೆ ಎಂದು ಹೇಳಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಳೆಯಿಂದ ಯಾವುದೆ ತೊಂದರೆಯಾಗದಂತೆ ಕ್ರಮ ವಹಿಸಲು ಸರ್ಕಾರ ಸನ್ನದ್ಧಾಗಿದೆ. ಸಂಸದರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಸರ್ಕಾರದಲ್ಲಿ ದುಡ್ಡಿನ ಕೊರತೆಯಿಲ್ಲ. ಈಗಾಗಲೇ ೨೫ ಕೋಟಿ ಅನುದಾನವಿದ್ದು, ಹೆಚ್ಚುವರಿ ದುಡ್ಡಿಗೂ ಯಾವುದೇ ಸಮಸ್ಯೆಯಿಲ್ಲವೆಂದರು. ಮಳೆಯಿಂದ ಮನೆಗಳು ಬಿದ್ದು, ಮತ್ಯೇನಾದರೂ ಸಮಸ್ಯೆಯಾದಲ್ಲಿ ತಕ್ಷಣವೇ ಪರಿಹಾರ ನೀಡಲಾಗುತ್ತದೆ. ಜನರ ಜೊತೆ ಸರ್ಕಾರವಿದೆ ಎನ್ನುವುದು ತೋರಿಸಿಕೊಡಲಾಗುತ್ತದೆ.
ಈ ಸಂದರ್ಭದಲ್ಲಿ ಸಂಸದ ಅಮರೇಶ ನಾಯಕ, ಶಾಸಕ ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಪೊಲೀಸ್ ವರಿಷ್ಠಧಿಕಾರಿ ನಿಖಿಲ್ ಬಿ, ಸಿಇಒ ನೂರ್ ಜಹಾರ್ ಖಾನೂಮ್, ಅಪರ ಜಿಲ್ಲಾಧಿಕಾರಿ ದುರುಗೇಶ್ ಕೆ.ಆರ್. ಉಪಸ್ಥಿತರಿದ್ದರು.