ಪ್ರವಾಹದ ಹಾನಿ ಸಮೀಕ್ಷೆಗೆ ಶಾಸಕರ ಸೂಚನೆ

ರಾಮದುರ್ಗ, ನ 4- ಕಳೆದ ವರ್ಷ ಪ್ರವಾಹದ ಹಾನಿ ಸರ್ವೇ ಕಾರ್ಯದಲ್ಲಿ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ದೊರೆಯಲಿಲ್ಲ. ಅದು ಮರುಕಳಿಸದಂತೆ ಅಧಿಕಾರಿಗಳು ಸ್ವತಃ ಸ್ಥಳಕ್ಕೆ ತೆರಳಿ ಯಾರಿಗೂ ಅನ್ಯಾಯವಾಗದಂತೆ ಸಮೀಕ್ಷೆ ಮಾಡಬೇಕು ತಪ್ಪಾದರೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಖಡಕ್ ಎಚ್ಚರಿಕೆ ನೀಡಿದರು.
ತಾಪಂ ಸಭಾಭವನದಲ್ಲಿ ಪ್ರವಾಹ ಮತ್ತು ಅತಿವೃಷ್ಠಿಯ ಹಾನಿ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಲಪ್ರಭಾ ನದಿ ಪ್ರವಾಹ ಹಾಗೂ ಅತಿವೃಷ್ಠಿಯಿಂದ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ನಷ್ಟವಾಗಿ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗೆ ಸರ್ಕಾರ ಬರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಯಾರದೋ ಪ್ರಭಾವಕ್ಕೆ ಒಳಗಾಗಿ ಸಂತ್ರಸ್ತರಿಗೆ ಅನ್ಯಾಯ ಮಾಡಬೇಡಿ ಪ್ರಾಮಾಣಿಕವಾಗಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಲು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ 2018ರಲ್ಲಿ ಸಂಭವಿಸಿದ ಪ್ರವಾಹದಿಂದ ಸಂಪೂರ್ಣ ಮನೆ ಬಿದ್ದು ನಿರಾಶ್ರಿತರಾಗಿದ್ದ ಪಟಕೋಟಿ ಗಲ್ಲಿಯ ನಿವಾಸಿ ಶೈಲಾ ಮುನವಳ್ಳಿ ತಮ್ಮಗೆ ಇನ್ನೂ ಪರಿಹಾರ ಬಂದಿಲ್ಲವೆಂದು ನಡೆಯುತ್ತಿದ್ದ ಸಭೆಗೆ ಆಗಮಿಸಿ ಶಾಸಕರಿಗೆ ಪೋಟೊ ಸಮೇತ ಮನವಿ ಮಾಡಿದರು.
ಪೋಟೊ ನೋಡಿದ ತಕ್ಷಣ ಶಾಸಕರು ಆಕ್ರೋಶಗೊಂಡು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಇಂತಹ ಹಲವಾರು ಸಂತ್ರಸ್ತರಿರಬಹುದು ಅಂತವರನ್ನು ಗುರುತಿಸಿ ಅವರಿಗೂ ಪರಿಹಾರ ನೀಡಬೇಕೆಂದು ತಿಳಿಸಿದರು.
ಪ್ರಭಾರಿ ತಹಸೀಲ್ದಾರ ಸೋಮಶೇಖರ ತಂಗೊಳ್ಳಿ, ತಾ.ಪಂ. ಇಒ ಮುರಳೀದರ ದೇಶಪಾಂಡೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.