ಪ್ರವಾಹದ ಜತೆ ಚೆಲ್ಲಾಟ ನದಿಗೆ ಹಾರಿದ ಯುವಕ ನಾಪತ್ತೆ

ಮುಂಬೈ,ಜು.೧೫- ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿರುವ ಹೊತ್ತಿನಲ್ಲೇ ಯುವಕರ ಹುಚ್ಚಾಟ ಮಿತಿಮೀರಿದೆ. ಯುವಕನೊಬ್ಬ ರಭಸದಿಂದ ಹರಿಯುತ್ತಿರುವ ನದಿಗೆ ಹಾರಿ ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ.
ನದಿಗೆ ಧುಮುಕುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ೨೩ ವರ್ಷದ ಯುವಕ ನಯೀಂ ಅಮೀನ್ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ವಿಪತ್ತು ನಿರ್ವಹಣಾ ತಂಡ ಶೋಧಕಾರ್ಯ ನಡೆಸಿದೆ. ನಿನ್ನೆ ತಡರಾತ್ರಿವರೆಗೂ ನಯೀಂನ ಹುಡುಕಾಟ ನಡೆಸಲಾಯಿತಾದರೂ ಆತ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ.
ಪುಣೆ, ನಾಸಿಕ್ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್‌ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.