ಪ್ರವಾಹದಿಂದ ಪಿಡಬ್ಲುಡಿಗೆ 1500 ಕೋಟಿ ರೂ ನಷ್ಟ: ಕಾರಜೋಳ

ಹೊಸಪೇಟೆ ನ 20 : ರಾಜ್ಯದಲ್ಲಿ‌ ಕಳೆದ ಮತ್ತು ಈ ವರ್ಷದಲ್ಲಿ ಬಿದ್ದ ಭಾರಿ ಮಳೆ, ಪ್ರವಾಹ ಮೊದಲಾದ ಕಾರಣಗಳಿಂದ ರಸ್ತೆಗಳು, ಸೇತುವೆಗಳು ಹಾಗೂ ಹಲವು ಕಟ್ಟಡಗಳು ನಾಶವಾಗಿದ್ದು ಇದರಿಂದ ಲೋಕೋಪಯೋಗಿ ಇಲಾಖೆಗೆ 1500 ಕೋಟಿ ರೂ ನಷ್ಟವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಅವರು‌ ಇಂದು ಇಲ್ಲಿನ‌ ಅಮರಾವತಿ ಅತಿಥಿ ಗೃಹದಲ್ಲಿ ನಡೆದ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರಿಗೆ ಈ ಮಾಹಿತಿ‌ ನೀಡಿದರು.
ಕಳೆದ ವರ್ಷದ ಮಳೆ ಮತ್ತು ಪ್ರವಾಹಗಳಿಂದ ರಸ್ತೆಗಳಲ್ಲಿ ಗುಂಡಿಬಿದ್ದು, ಸೇತುವೆ ಕುಸಿದು, ಕಟ್ಟಡಗಳು ಬಿದ್ದು 7 ಸಾವಿರ ಕೋಟಿ ನಷ್ಟವಾಗಿದ್ದು, ಈ ವರ್ಷವೂ 3500 ಕೋಟಿ ರೂ ನಷ್ಟ ಇಲಾಖೆಗೆ ಆಗಿದೆ. ಹಾನಿಯ ದುರಸ್ತಿಗೆ ಕಳೆದ ವರ್ಷ 500 ಕೋಟಿ ರೂ ಬಿಡುಗಡೆ ಮಾಡಲಾಗಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ರಸ್ತೆಗಳ ಮತ್ತು ಸೇತುವೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ನಿನ್ನೆ ಸಭೆಯನ್ನು ನಡೆಸಲಾಗಿದ್ದು 15 ದಿನಗಳ ಒಳಗಾಗಿ ಹಾಳಾಗಿರುವ ರಸ್ತೆಗಳ‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ನೀತಿ ಸಂಹಿತೆ ಇದ್ದ ಕಾರಣ ಹಲವಡೆ ಕಾಮಗಾರಿಗಳು ತಡವಾಗಿದೆಂದರು.
ಸದ್ಯ ಜಿಲ್ಲೆಯಲ್ಲಿ 24 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಬಾಕಿ ಇದೆ. ಪ್ರಕ್ರಿಯೆ ಮುಗಿದ ತಕ್ಷಣ, ಕಡಿಮೆ ವೆಚ್ಚದ ನಿರ್ವಹಣೆ ಸಲ್ಲಿಸುವವರಿಗೆ ಟೆಂಡರ್ ನೀಡಿ ಮಾರ್ಚ್ 31ರ ಒಳಗಾಗಿ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಬಳ್ಳಾರಿಯ 2650 ಕಿ.ಮೀ ರಾಜ್ಯಹೆದ್ದಾರಿ ಹಾಗೂ 5069 ಕಿಮೀ ಜಿಲ್ಲೆಯ ಮುಖ್ಯರಸ್ತೆಗಳ ನಿರ್ವಹಣೆಗೆ ಈಗಾಗಲೇ 22ಕೋಟಿ ಮಂಜೂರಾಗಿದೆ. ಅದೇ ರೀತಿ ಪ್ರವಾಹ ಪರಿಹಾರವಾಗಿ 21ಕೋಟಿ ಮಂಜೂರಾಗಿ ಶೇ.30ರಷ್ಟು ಕಾಮಗಾರಿ ಪೂರ್ಣವಾಗಿದೆ. ರಸ್ತೆಗಳ ಪುನರ್ ನಿರ್ಮಾಣ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಹೆಚ್ಚು ಮಳೆ ಆಗಿರುವ ಕಡೆ ಕೊಂಚ ತಡವಾಗಬಹುದು. ಎಲ್ಲಾ ಕಾಮಗಾರಿಗಳನ್ನು ನಂಜುಂಡಪ್ಪ ವರದಿ ಆಧಾರದ ಮೇಲೆ ಪೂರ್ಣಗೊಳಿಸಲಾಗುತ್ತದೆಂದರು.
ಬಹಳ ವರ್ಷದ ಬೇಡಿಕೆಯಂತೆ ನೂತನ ಜಿಲ್ಲೆ ಆಗಿದೆ ಜಿಲ್ಲೆಗೆ ಎಲ್ಲಾ ವ್ಯವಸ್ಥೆ ಮಾಡಬೇಕಿದೆ, ಅದಕ್ಕೆ ಕೊಂಚ ಕಾಲಾವಕಾಶ ಬೇಕು. ಹೊಸಪೇಟೆಯು ರಾಜ್ಯ ಹೆದ್ದಾರಿ, ನದಿ, ಐತಿಹಾಸಿಕ ಹಿನ್ನಲೆ ಇರುವ ಊರಾಗಿದ್ದು, ಜಿಲ್ಲೆಯಾಗುವುದರಿಂದ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದರು.
ಹುಬ್ಬಳ್ಳಿ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ. ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಕೇಂದ್ರ ಸರ್ಕಾರದ ವ್ಯಾಪ್ತಿಯದ್ದಾಗಿದ್ದು, ಮೊನ್ನೆ ದೆಹಲಿಗೆ ತೆರಳಿದಾಗ ವಿಳಂಬವಿರುವ ಹೆದ್ದಾರಿ ಕಾಮಗಾರಿಗಳ ಕುರಿತು ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಸಹಾಯಕ ಆಯುಕ್ತ ಶೇಖ್ ತನ್ವೀರ್ ಆಸೀಫ್ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.