ಪ್ರವಾಹಕ್ಕೆ ಕೊಚ್ಚಿ ಹೋದ ಬೆಳೆ: ಕಂಗಾಲಾದ ರೈತರು

ಲಕ್ಷ್ಮೇಶ್ವರ,ಜ4 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿದು ಜಮೀನುಗಳು ಕೊಚ್ಚಿಕೊಂಡು ಹೋಗಿದ್ದು ರೈತರು ಒಂದು ಕಡೆ ಮಳೆಯಿಂದ ಬೆಳೆ ಹಾನಿ ಅನುಭವಿಸಿದ್ದರೆ ಇನ್ನೊಂದು ಕಡೆ ಮಳೆಯಿಂದ ಜಮೀನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.
ತಾಲೂಕಿನ ಗೊಜನೂರು ಗ್ರಾಮದಿಂದ ಹರಿದು ಬರುವ ದೊಡ್ಡಹಳ್ಳ ಬಟ್ಟೂರು ಮುಖಾಂತರ ಬಡ್ನಿಯಲ್ಲಿ ಹಾದು ಹೋಗುತ್ತದೆ. ಈ ಸಂದರ್ಭದಲ್ಲಿ ಮಾರ್ಗದುದ್ದಕ್ಕೂ ಹಳ್ಳದ ಪ್ರವಾಹಕ್ಕೆ ಸಿಲುಕಿ ಬೆಳೆ ಜಮೀನು ಕಳೆದುಕೊಂಡು ಹಣೆಗೆ ಕೈ ಹಚ್ಚಿಕೊಂಡು ಕುಳಿತಿದ್ದಾರೆ
ಬಡ್ನಿ ಗ್ರಾಮದ ಧರ್ಮಣ್ಣ ಬಟಗುರ್ಕಿ ಎಂಬವರಿಗೆ ಸೇರಿದ ಜಮೀನು ಹಳ್ಳದ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದು ಹಳ್ಳದಲ್ಲಿ ಬೆಳೆದು ನಿಂತಿರುವ ಆಪು ನೀರಿಗೆ ತಡೆ ಒಡ್ಡಿ ಎಲ್ಲೆಂದರಲ್ಲಿ ಜಮೀನುಗಳಲ್ಲಿ ನುಗ್ಗಿದ್ದರಿಂದ ಬೆಳೆಯೊಂದಿಗೆ ಜಮೀನು ಹಾಳಾಗಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಹಳ್ಳಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹಳ್ಳದ್ದುದ್ದಕ್ಕೂ ಅಲ್ಲಲ್ಲಿ ಬಾಂಧಾರಗಳನ್ನು ನಿರ್ಮಿಸಿದ್ದು ಆ ಬಾಂಧಾರಗಳು ಸಹ ಕೊಚ್ಚಿಕೊಂಡು ಹೋಗಿರುವುದರಿಂದ ರೈತರು ಯಾರನ್ನು ಕೇಳಬೇಕು ಎಂಬ ಚಿಂತೆಯಲ್ಲಿದ್ದಾರೆ.
ವಿಪರೀತವಾದ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈಗ ಕೊಚ್ಚಿಕೊಂಡು ಹೋಗಿರುವ ಜಮೀನುಗಳಿಗೆ ಪುನರ್ ಬದುಕು ಅಥವಾ ಒಡ್ಡು ಹಾಕಿಸಲು ಲಕ್ಷಾಂತರ ರೂಪಾಯಿ ಬೇಕಾಗಿತ್ತು. ಕೃಷಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ ಜಂಟಿಯಾಗಿ ರೈತರ ಜಮೀನುಗಳಿಗೆ ಮಧು ಹಾಕಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸ ಯೋಜನೆಯಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗವನ್ನು ಕೊಡುವ ನಿಟ್ಟಿನಲ್ಲಿ ಸಹಾಯಕಾರಿಯಾಗುತ್ತದೆ.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದು ಪರಿಶೀಲನೆ ಮಾಡಿ ವಿಶೇಷ ಪ್ರಕರಣಗಳು ಎಂದು ಪರಿಗಣಿಸಿ 3 ಇಲಾಖೆಗಳ ಸಹಯೋಗದಲ್ಲಿ ವಿನುತನವಾದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದು ರೈತ ಧರ್ಮಣ್ಣ ಬಟಗುರ್ಕಿಯವರ ಅಭಿಪ್ರಾಯವಾಗಿದೆ.