
ಸಂಜೆವಾಣಿ ವಾರ್ತೆ
ಚಾಮರಾಜನಗರ. ಆ.03:- ರಾಜ್ಯದ ಗಡಿ ಜಿಲ್ಲೆಯ ಜೊತೆಗೆ ಕಾಡಂಚಿನ ಪ್ರದೇಶವವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಗಿರಿಜನರ ಅಭಿವೃದ್ದಿಯನ್ನು ಮೊದಲ ಅದ್ಯತೆಯನ್ನಾಗಿ ತೆಗೆದುಕೊಂಡು ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡುವುದಾಗಿ ನೂತನ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪನಾಗ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಈ ಹಿಂದೆ ಆಯುಕ್ತೆಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ನರೇಗಾ ನೋಡಲ್ ಅಧಿಕಾರಿಯಾಗಿದ್ದಾಗ ಜಿಲ್ಲೆಗೆ ಭೇಟಿ ನೀಡಿದ್ದೆ. ಕಳೆದ 20 ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಅಂದಿನ ಕಚೇರಿಯಲ್ಲಿಯೇ ಹೆಚ್ಚು ಕಾಲ ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ, ಜಿಲ್ಲೆಯ ಅಭಿವೃದ್ದಿ ಚಿತ್ರಣವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ ಎಂದರು.
ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯವನ್ನು ಕಲ್ಪಿಸಿದಾಗ ಜಿಲ್ಲೆಯು ತಾನಾಗಿಯೇ ಅಭಿವೃದ್ದಿಯತ್ತ ಸಾಗುತ್ತದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಮೂಲ ಸೌಕರ್ಯಗಳ ಕೊರತೆ, ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಅನುಕೂಲಗಳು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಇದೆ. ಬಾಲ್ಯವಿವಾಹ, ಮಕ್ಕಳಲ್ಲಿ ಅಪೌಷ್ಟಿಕತೆ ಕೂಡ ಕಂಡುಬರುತ್ತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಬೇರೆ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿವೆ. ಆದರೆ, ಚಾಮರಾಜನಗರ ಜಿಲ್ಲೆಯಲ್ಲಿ ಜನತೆ ಸರ್ಕಾರಿ ಆಸತ್ರೆಗಳನ್ನೇ ಅವಲಂಬಿಸಿಕೊಂಡಿದ್ದಾರೆ. ಆದ್ದರಿಂದ ಆಸ್ಪತ್ರೆಗಳಲ್ಲಿ ಪ್ರಮುಖವಾಗಿ ಡಯಾಲಿಸಿಸ್ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿವೆ. ಇಲ್ಲಿ ಕಲಿಕೆಗೆ ಸಂಬಂಧಿಸಿದಂತೆ ಕೌಶಲ್ಯ ಹಾಗೂ ಮೂಲ ಸೌಕರ್ಯ ಒದಗಿಸಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಅವರಿಗೆ ಬೇಸಿಕ್ ಶಿಕ್ಷಣ ದೊರೆತರೆ ಮುಂದಿನ ಅವರ ಶಿಕ್ಷಣ ಸುಲಭವಾಗುತ್ತದೆ.ಈ ನಿಟ್ಟಿನಲ್ಲಿ ಅಂಗನವಾಡಿಗಳಲ್ಲಿ ಅಭಿವೃದ್ದಿಪಡಿಸಿ, ಪೌಷ್ಟೀಕ ಆಹಾರದ ಜೊತೆಗೆ ಕಲಿಕೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಶಾಲಾ ಕೊಠಡಿಗಳ ರಿಪೇರಿ ಮಾಡಿಸುವ ಮೂಲಕ ಮೂಲ ಸೌಕರ್ಯ ಒದಗಿಸಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಅಲ್ಲದೇ ಜಿಲ್ಲೆಯಲ್ಲಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಲು ಕ್ರಮವಹಿಸಬೇಕಿದೆ. ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಯುಜಿಡಿ ಅಲ್ಲದೇ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕಂಡುಬರುವ ಸಮಸ್ಯೆ ಹೆಚ್ಚಾಗಿದೆ. ಇದನ್ನು ಸರಿಪಡಿಸಲು ಬೀದಿ ಸಮಸ್ಯೆಗಳನ್ನು ಬಗೆಹರಿಸಲು ಹಂತ ಹಂತವಾಗಿ ದೀಪಗಳು, ಉತ್ತಮ ರಸ್ತೆ ನಿರ್ಮಾಣ, ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಅಲ್ಲದೇ ಸಿಮ್ಸ್ ಆಸ್ಪತ್ರೆ ಚಾಮರಾಜನಗರದಿಂದ ದೂರ ಇರುವುದರಿಂದ ರೋಗಿಗಳಿಗೆ ಓಡಾಡಲು ತೊಂದರೆಯಾಗುತ್ತಿರುವ ಕುರಿತು ಚರ್ಚಿಸಿ ಚಾಮರಾಜನಗರದಲ್ಲಿಯೇ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಸೂಚಿಸಲಾಗುವುದು. ಅಲ್ಲದೇ ಕೇಂದ್ರ ಸ್ಥಾನದಲ್ಲಿ ಉಳಿಯದೇ ಮೈಸೂರಿನಿಂದ ಬರುತ್ತಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದು ಇಲ್ಲೇ ವಾಸ್ತವ್ಯ ಹೂಡಲು ಸೂಚಿಸಲಾಗುವುದು ಎಂದರು.
ಚೆಲುವ ಚಾಮರಾಜನಗರ ಪುನರಾರಂಭ : ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣವಿದೆ. ಈ ಹಿಂದೆ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಆರಂಭಿಸಲಾಗಿದ್ದ ಚೆಲುವ ಚಾಮರಾಜನಗರ ಸ್ಥಗಿತಗೊಂಡಿದ್ದು ಮತ್ತೆ ಅದನ್ನು ಪುನರಾರಂಭಿಸಲಾಗುವುದು. ಅಲ್ಲದೇ ಚಾಮರಾಜನಗರದ ವಿವಿಧೆಡೆ ಅಪೂರ್ಣಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗು ವುದು. ಅಲ್ಲದೇ ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದರು.
ಸÀಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್ ಪತ್ರಕರ್ತರು ಭಾಗಹಿಸಿದ್ದರು.