ಪ್ರವಾಸಿ ತಾಣಗಳ ಪುನಶ್ಚೇತನಕ್ಕೆ ಕ್ರಮ

ಮಧುಗಿರಿ, ಜು. ೨೬- ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ ಪಾಳು ಬಿದ್ದಿರುವ ಸ್ಥಳಗಳು ಮತ್ತು ಶಿಥಿಲಾವಸ್ಥೆಯಲ್ಲಿರುವ ಸ್ಥಳಗಳನ್ನು ನವೀಕರಿಸಲು ಜೀರ್ಣೋದ್ಧಾರ ಸಮಿತಿಯವರು ಮನವಿ ಮಾಡಿದ ಮೇರೆಗೆ ಪುನಶ್ಚೇತನಗೊಳಿಸಲಾಗುವುದೆಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಗೌರಿ ಭಟ್ ತಿಳಿಸಿದರು.
ಈ ದೇವಸ್ಥಾನವು ಪುರಾತತ್ವ ಇಲಾಖೆ ಅಡಿಯಲ್ಲಿ ಬರುವುದರಿಂದ ಮತ್ತು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಸ್ಮಾರಕಗಳನ್ನು ದತ್ತು ಪಡೆಯುವ ಮೂಲಕ ಖಾಸಗಿ ಸಂಸ್ಥೆಗಳ ಮುಖೇನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹೊಸ ಯೋಜನೆ ಸರ್ಕಾರದ ಚಿಂತನೆಯಲ್ಲಿದ್ದು ಅದರಂತೆ ಈ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯ ಆರ್ ಎಲ್ ಎಸ್ ರಮೇಶ್, ಜಿ ಆರ್ ಧನಪಾಲ್, ಧೋಲಿಬಾಬು, ಪ್ರಧಾನ ಅರ್ಚಕರಾದ ನಟರಾಜ ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.