ಪ್ರವಾಸಿ ತಾಣಗಳ ಪರಿಚಯ, ಅನ್ವೇಷಣೆ ಮುಖ್ಯ

ಸಂಜೆವಾಣಿ ವಾರ್ತೆ

ಶಿವಮೊಗ್ಗ.ಜು.೨೧: ಪ್ರವಾಸಿ ತಾಣಗಳ ಕುರಿತು ಪರಿಚಯಿಸುವ ಹಾಗೂ ಅನ್ವೇಷಣೆ ಮಾಡುವ ಪ್ರವೃತ್ತಿ ರಾಜ್ಯದಲ್ಲಿ ಕಡಿಮೆ. ಆದ್ದರಿಂದ ರಾಜ್ಯದ ಬಹುತೇಕ ಪ್ರವಾಸಿ ಸ್ಥಳಗಳ ಬಗ್ಗೆ ಜನರಿಗೆ ತಿಳಿದಿಲ್ಲ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಪ್ರವಾಸೋದ್ಯಮ ಹಾಗೂ ಪೂರಕ ಅಭಿವೃದ್ಧಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಪ್ರವಾಸಿ ತಾಣಗಳಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿಯೂ ಐವತ್ತಕ್ಕೂ ಅಧಿಕ ಪ್ರವಾಸಿ ಕ್ಷೇತ್ರಗಳಿವೆ. ಪರಿಸರ, ಐತಿಹಾಸಿಕ, ಧಾರ್ಮಿಕ ಸೇರಿದಂತೆ ಆಕರ್ಷಣೆಯ ಪ್ರವಾಸ ಸ್ಥಳಗಳನ್ನು ಪರಿಚಯಿಸುವ ಹಾಗೂ‌ ಅನ್ವೇಷಿಸುವ ಕಾರ್ಯ ಆಗಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಸಹ ನೂರಾರು ಪ್ರವಾಸಿ ಕ್ಷೇತ್ರಗಳಿವೆ. ಪರಿಚಯಿಸುವ ಕೆಲಸ ಮಾಡುವುದರಿಂದ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.ಪ್ರವಾಸೋದ್ಯಮದ ಸುಸ್ಥಿರ ಅಭಿವೃದ್ಧಿ ಆಗಬೇಕು. ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ, ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಬೇಕು. ಕೃಷಿ ಪ್ರವಾಸೋದ್ಯಮದ ಪ್ರಾಮುಖ್ಯತೆ ಅರಿವು‌ ಮಾಡಿಸಬೇಕು. ಪ್ರವಾಸೋದ್ಯಮದಲ್ಲಿ ಇರುವ ಉದ್ಯೋಗ ಸಾಧ್ಯತೆಗಳ ಬಗ್ಗೆ ಹೆಚ್ಚಿನ ಜಾಗೃತಿ ಆಗಬೇಕು ಎಂದರು.ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನ ಪ್ರಾಚಾರ್ಯೆ ಡಾ. ಎಂ.ಕೆ.ವೀಣಾ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ ಆಗುತ್ತಿದ್ದು, ಪರಿಸರ ಹಾನಿಯಾಗುವುದನ್ನು ತಪ್ಪಿಸಬೇಕು. ಪರಿಸರ ಸಂರಕ್ಷಣೆ ಜತೆಯಲ್ಲಿ ಪ್ರವಾಸೋದ್ಯಮ ಪೂರಕ ಅಭಿವೃದ್ಧಿ ಆಗಬೇಕು. ನೈಸರ್ಗಿಕವಾಗಿ ಇರುವ ಪ್ರವಾಸಿ ಸ್ಥಳಗಳ ಗುರುತಿಸುವ ಕೆಲಸ‌‌ ಆಗಬೇಕು. ಪಾರಂಪರಿಕ ಚಟುವಟಿಕೆಗಳ ಕುರಿತಾಗಿರುವ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.