ಪ್ರವಾಸಿ ತಾಣಗಳಿಗೆ ಭಾರತ್ ಗೌರವ್ ರೈಲು ಸಂಚಾರ

ನವದೆಹಲಿ,ನ.೨೪- ದೇಶದ ಪ್ರವಾ ಸೋದ್ಯಮ ತಾಣಗಳಿಗೆ ’ಭಾರತ್ ಗೌರವ್ ಹೆಸರಿನಲ್ಲಿ ೧೯೦ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ದೇಶದ ಸಂಪದ್ಭರಿತ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಇಡೀ ಜಗತ್ತಿಗೆ ಪರಿಚಯಿಸಲು ಖಾಸಗಿ ಸಹಭಾಗಿತ್ವದಲ್ಲಿ ಭಾರತ್ ಗೌರವ್ ರೈಲುಗಳು ಸಂಚರಿಸಲಿದೆ.
ಈ ೧೯೦ ರೈಲುಗಳಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಐಆರ್‌ಸಿಟಿಸಿ ಅನುಮೋದನೆ ನೀಡಿದೆ. ಭಾರತ್ ಗೌರವ್ ರೈಲುಗಳಲ್ಲಿ ೩,೦೩೩ ಕೋಚ್‌ಗಳನ್ನು ಗುರುತಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈಗಾಗಲೇ ಈ ಸಂಬಂಧ ಅರ್ಜಿಗಳ ಸ್ವೀಕಾರ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈಲು ನಿರ್ವಹಣೆ, ನಿಲ್ದಾಣ ಮತ್ತು ಇನ್ನಿತರ ಸೌಲಭ್ಯಗಳನ್ನು ರೈಲ್ವೆ ಇಲಾಖೆ ಕಲ್ಪಿಸಲಿದೆ ಎಂದು ಹೇಳಿದರು. ಪ್ರತಿಯೊಂದು ಭಾರತ್ ಗೌರವ್ ರೈಲುಗಳಲ್ಲಿ ೨ ಗಾರ್ಡ್ ವ್ಯಾನ್‌ಗಳೂ ಸೇರಿದಂತೆ ೧೪ ರಿಂದ ೧೬ ಕೋಚ್‌ಗಳು ಇರಲಿವೆ.
ಕರ್ನಾಟಕ, ತಮಿಳುನಾಡು, ಒಡಿಶ್ಶಾ ಮತ್ತು ರಾಜಾಸ್ತಾನ ಈ ರೈಲುಗಳ ಕಾರ್ಯನಿರ್ವಹಣೆ ಬಗ್ಗೆ ಆಸಕ್ತಿ ತೋರಿಸಿವೆ. ಖಾಸಗಿ ಸಹಭಾಗಿತ್ವದಲ್ಲೂ ಈ ರೈಲುಗಳ ಸಂಚಾರ ನಡೆಯಲಿದ್ದು, ದರ ಮತ್ತು ಇನ್ನಿತರ ಸೌಲಭ್ಯಗಳ ಬಗ್ಗೆ ಮುಕ್ತ ಅವಕಾಶ ನೀಡಲಾಗಿದೆ. ಆದರೆ, ಈ ರೈಲುಗಳು ಪ್ರತಿನಿತ್ಯ ಸಂಚರಿಸುವುದಿಲ್ಲ. ವೇಳಾಪಟ್ಟಿ ಅನುಸಾರವೇ ಸಂಚರಿಸಲಿದೆ. ಈಗಾಗಲೆ ಐಆರ್‌ಸಿಟಿಸಿ ರಾಮಾಯಣ ರೈಲುಗಳ ಓಡಾಟ ಆರಂಭಿಸಿದ್ದು, ಈಗ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಭಾರತ್ ಗೌರವ್ ರೈಲು ಓಡಿಸಲು ತೀರ್ಮಾನಿಸಿದೆ.