ಪ್ರವಾಸಿ ಗೈಡ್‍ಗಳ ಬೇಡಿಕೆ ಈಡೇರಿಸಿ : ಇಲಾಖಾ ನಿರ್ದೇಶಕರಿಗೆ ಮನವಿ.

ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ7: ರಾಜ್ಯದ ಪ್ರವಾಸಿ ಗೈಡ್‍ಗಳಿಗೆ ಮಾಸಿಕ ಗೌರವಧನ ಮತ್ತು ಏಕ ಮಾದರಿಯ ಸಮವಸ್ತ್ರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪದಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧೂ ರೂಪೇಶ್ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ಮನವಿ ಸಲ್ಲಿಸಿದರು.
ಕೊರೋನಾ ಸಮಯದಲ್ಲಿ ರಾಜ್ಯದ ಎಲ್ಲಾ ಪ್ರವಾಸಿ ಮಾರ್ಗದರ್ಶಿಗಳಿಗೆ 5000 ರು.ಗಳನ್ನು ಸಹಾಯಧನವಾಗಿ ನೀಡಿದ್ದು, ಕಷ್ಟದ ಸಮಯದಲ್ಲಿ ನಮಗೆ ಅನುಕೂಲವಾಗಿದೆ. ಅದರಂತೆ ಇಲಾಖೆಯಿಂದ ಗೈಡ್‍ಗಳಿಗೆ ಏಕ ಮಾದರಿಯ ಸಮವಸ್ತ್ರವನ್ನು ನೀಡಬೇಕು. ಜತೆಗೆ ಪ್ರವಾಸೋದ್ಯಮವನ್ನು ನಂಬಿ, ಪ್ರವಾಸಿಗರು ನೀಡಿದ ಅಲ್ಪ-ಸ್ವಲ್ಪ `ಹಣದಲ್ಲಿ ಜೀವನವನ್ನು ಸಾಗಿಸುತ್ತಿರುವ ನಮಗೆ ಸರ್ಕಾರದಿಂದ ಇದುವರೆಗೆ ಶಾಶ್ವತವಾಗಿ ಯಾವುದೇ ಆರ್ಥಿಕ ಭದ್ರತೆ ಇರುವುದಿಲ್ಲ. ಆದ್ದರಿಂದ ರಾಜ್ಯದ ಗೈಡ್‍ಗಳಿಗೆ ಮಾಸಿಕ ಗೌರವಧನ ನೀಡಲು ಇಲಾಖೆಯಿಂದ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರವಾಸಿ ಮಾರ್ಗದರ್ಶಿ ಸಂಘ ರಾಜ್ಯಾಧ್ಯಕ್ಷ ಮಂಜುನಾಥ ಗೌಡರು, ರಾಜ್ಯದ ಪ್ರಧಾನ ಕಾರ್ಯದರ್ಶಿ ವಿ.ವಿರುಪಾಕ್ಷಿ, ಪದಾಧಿಕಾರಿಗಳಾದ ಬೇಲೂರು ತಾರಾನಾಥ್, ಮೋದಿನ್ ಖಾನ್, ಎಸ್. ಆರ್. ಅಶೋಕ್, ರಾಘವೇಂದ್ರ, ದೇವರಾಜ, ರಮೇಶ್, ಎಚ್. ಹುಲಗಪ್ಪ, ವಿ. ಗೋಪಾಲ್, ಶಿವಕಕುಮಾರ್ ಸುರೇಶ್ ಮತ್ತಿತರರಿದ್ದರು.