ಪ್ರವಾಸಿಗರಿಗೆ ಬಾಗಿಲು ತೆರೆದ ಚೀನಾ

ಬೀಜಿಂಗ್, ಮಾ.೧೪- ಕಳೆದ ಮೂರು ವರ್ಷಗಳಿಂದ ಜಾಗತಿಕ ಪ್ರವಾಸಿಗರಿಗೆ ಬಾಗಿಲು ಮುಚ್ಚಿದ್ದ ಚೀನಾ ಇದೀಗ ತನ್ನ ಕಠಿಣ ನಿರ್ಬಂಧಿತ ನಿಯಮಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ನಾಳೆಯಿಂದ (ಮಾ.೧೫) ಚೀನಾ ತನ್ನ ಎಲ್ಲಾ ರೀತಿಯ ವೀಸಾ ವಿತರಣೆ ಪ್ರಕ್ರಿಯೆಗಳನ್ನು ಮರುಸ್ಥಾಪಿಸಲು ನಿರ್ಧರಿಸಿದೆ.
೨೦೨೦ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಚೀನಾ ವಿದೇಶಿ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿತ್ತು. ಬಳಿಕ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದರೂ ಸೋಂಕು ನಿಯಂತ್ರಣಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಮೃತಪಟ್ಟಿದ್ದರೂ ಚೀನಾ ಮಾತ್ರ ಅಧಿಕೃತ ದಾಖಲೆಯನ್ನು ವಿಶ್ವಸಮುದಾಯಕ್ಕೆ ನೀಡಿರಲಿಲ್ಲ. ಸದ್ಯ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಚೀನಾ ಹೇಳುತ್ತಿದ್ದರೂ ಬಹುಷಃ ವಿಶ್ವಸಮುದಾಯ ಇದನ್ನು ನಂಬುವ ಇರಾದೆಯಲ್ಲಿಲ್ಲ. ಸದ್ಯ ನಾವು ಕೊರೊನಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದೇವೆ ಎಂದು ಚೀನಾ ಕಳೆದ ತಿಂಗಳು ಅಧಿಕೃತವಾಗಿ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮಾರ್ಚ್ ೧೫ರಿಂದ ತನ್ನ ಗಡಿಗಳನ್ನು ವಿದೇಶಿ ಪ್ರವಾಸಿಗರಿಗೆ ಮುಕ್ತಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಚೀನಾ ಕಳೆದ ೫೦ ವರ್ಷಗಳಲ್ಲೇ ಅತ್ಯಂತ ಕಳಪೆ ಮಟ್ಟದ ಆರ್ಥಿಕ ಕುಸಿತ ಕಂಡಿದ್ದು, ಸದ್ಯ ಪ್ರವಾಸಿಗರಿಗೆ ದೇಶವನ್ನು ಮುಕ್ತಗೊಳಿಸುವ ಮೂಲಕ ಇದನ್ನು ಸರಿದಾರಿಗೆ ತರುವ ಯೋಜನೆ ಹಾಕಿಕೊಂಡಿದೆ.