ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಹಿರೇದಿಡುಗು ಜಲಪಾತ

ಗುಳೇದಗುಡ್ಡ, ಮೇ23: ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾದ ಪರಿಣಾಮ ಗುಳೇದಗುಡ್ಡ-ಕೋಟೆಕಲ್ಲ ಹಿರೇದಿಡುಗು ಜಲಪಾತಕ್ಕೆ ಈಗ ಮತ್ತೇ ಜೀವಕಳೆ ಬಂದಿದ್ದು, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.
ಕಳೆದ ಎರಡ್ಮೂರು ದಿನಗಳಿಂದ ಈ ಹಿರೇದಿಡುಗು ಜಲಪಾತ ಮೈದುಂಬಿ ಹರಿಯುತ್ತಿದೆ. ಹಲವಾರು ಜನರು ವಿಶೇಷವಾಗಿ ಯುವಕರು ಈ ಕಿರು ಜಲಪಾತಕ್ಕೆ ಭೇಟಿ ನೀಡಿ, ಧುಮ್ಮಿಕ್ಕಿ ಹರಿಯುವ ನೀರಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಜಲಪಾತದ ಕೆಳಗೆ ಸ್ನಾನ ಮಾಡಿ ಖುಷಿ ಅನುಭವಿಸುತ್ತಿದ್ದಾರೆ. ಮಳೆಗಾಲಯದಲ್ಲಿ ತನ್ನ ಸೌಂದರ್ಯ ಪ್ರದರ್ಶಿಸುವ ಈ ಜಲಪಾತ ಈ ಭಾಗದ ಪ್ರವಾಸ ಪ್ರೀಯರಿಗೆ ಬಲು ಅಚ್ಚುಮೆಚ್ಚು ತಾಣವೆನಿಸಿದೆ. ಈ ಬಾರಿ ಮೇ ತಿಂಗಳ ಬೇಸಿಗೆಯಲ್ಲಿಯೇ ಉತ್ತಮವಾಗಿ ಮಳೆ ಬಿದ್ದು ಬಿಸಿಲು ಮೂಡಿದ್ದರಿಂದ ಜಲಪಾತ ಮತ್ತಷ್ಟು ಜೋರು ಹರಿಯುತ್ತದೆ.
ಗುಳೇದಗುಡ್ಡ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರವಿರುವ ಈ ಜಲಪಾತ ಕೋಟಿಕಲ್ಲ ಗ್ರಾಮಕ್ಕೆ ಹತ್ತಿಕೊಂಡಿರುವ ಇರುವ ವಿಶಾಲವಾದ ಗುಡ್ಡದ ಮೇಲೇರಿದರೆ ಸಿಗುತ್ತದೆ. ವಿಶಾಲವಾದ ಗುಡ್ಡದ ಕೊಳ್ಳದಲ್ಲಿ ಸುಮಾರು 25 ಅಡಿ ಎತ್ತರಿದಂದ ಹಾಲಿನಂತೆ ಧುಮುಕುತ್ತಿದೆ ಈ ಜಲಪಾತ. ಇಲ್ಲಿರುವ ಗಿಡಮರಗಳನ್ನು ನೋಡಿದರೆ ಮಲೆನಾಡನ್ನು ನೆನಪಿಸುತ್ತದೆ. ಇದು ಬಯಲುನಾಡಿನ ಜೋಗ ಎಂದೇ ಪ್ರಸಿದ್ಧಿಯಾಗಿದೆ.