
ಆಲಮಟ್ಟಿ :ಆ.19: ಪುರಾಣ,ಪ್ರವಚನದ ಕಥೆಗಳಲ್ಲಿ ಮೂಡಿಬರುವ ಧಾರ್ಮಿಕ ವಾಣಿಗಳು ಒಂಥರಾ ವಿದ್ಯುತ್ ಪ್ರಸರಣ ಇದ್ದಂತೆ. ಅವು ನಮ್ಮ ಮನದಂಗಳದಲ್ಲಿ ಪ್ರಸರಿಸಿ ಶೇಖರಣೆವಾಗಿರುವ ಕಲುಷಿತ ಅಂಧಕಾರವನ್ನು ಶುಚಿಗೊಳಿಸುತ್ತವೆ. ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ದುತ್ತವೆ ಎಂದು ಚಿಮ್ಮಲಗಿ ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ದರೇಣುಕ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಪ್ರತಿ ವರ್ಷದಂತೆ ಇಲ್ಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾಸಂಘ ಆಲಮಟ್ಟಿ ಶಾಖೆ ವತಿಯಿಂದ ತಿಂಗಳ ಪಯರ್ಂತ ನಡೆಯಲಿರುವ ಶ್ರೀ ವೀರೇಶ್ವರ ನಾಲತ್ವಾಡ ಶರಣರ ಪುರಾಣ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭವಮುಕ್ತ ಬದುಕಿಗೆ ಆಧ್ಯಾತ್ಮದ ಮಾರ್ಗ ಸೂಕ್ತ. ಇದರಲ್ಲಿ ಪ್ರತಿಯೊಬ್ಬರು ನಡೆದು ಧಾಮಿ9ಕ ಮನೋಭಾವ ಬೆಳೆಸಿಕೊಳ್ಳಬೇಕು. ಕೇವಲ ಶ್ರಾವಣ ಮಾಸದಲ್ಲಿ ಧಾರ್ಮಿಕ ಭಾವ ಮೈಗೂಡಿಸಿಕೊಂಡರೆ ಸಾಲದು. ಅದು ವರ್ಷವಿಡೀ ಹೃದಯಾಂತರದಲ್ಲಿ ನಿತ್ಯ, ನಿರಂತರ ನೆಲೆಗೊಳ್ಳಬೇಕು. ದೇವ ನಾಮ ಸ್ಮರಣೆಯಿಂದ ಮೋಕ್ಷ ಪ್ರಾಪ್ತಿವಾಗುವುದು.ಆ ಕಾರಣ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಪ್ರಾಂಜಲ್ಯ ಮನಸ್ಸಿನ ಒಲವು ಮೂಡಿಬರಬೇಕು ಎಂದರು.
ಭಯ ಮುಕ್ತ ಬದುಕಿಗಾಗಿ ಧಾರ್ಮಿಕ ಆಚರಣೆಯಲ್ಲಿ ತೋಡಗಬೇಕು. ಒಳ್ಳೆಯ ಆಚಾರ,ವಿಚಾರಗಳು ಜೀವನದ ಶ್ರೇಯಸ್ಸಿಗೆ ಪ್ರೇರಣೆಗಳಾಗಿವೆ. ಅರಿವು ಎಂಬ ಪದ ಮೈಮನ ಸ್ಪರ್ಶಿಸಿದರೆ ಸಾಕು ಜೀವನ ಪಾವನ ಎಂದರು.
ಮನದ ಕತ್ತಲು ಹೋಗಲಾಡಿಸಲು ಹಾಗೂ ದುರ್ನಡತೆ, ಕೆಟ್ಟ ಆಲೋಚನೆಯನ್ನು ಕುಗ್ಗಿಸಲು ಪ್ರವಚನಗಳು ಸಂಜೀವಿನಿಯಾಗಿವೆ. ಇಂಥ ವಿಚಾರಗಳ ಸೆಲೆ,ಬಲೆಯಿಂದ ಮುಕ್ತಿಗೊಳಿಸುವ ದಿವ್ಯ ಶಕ್ತಿ ಪುರಾಣ ಪ್ರವಚನಗಳಲ್ಲಿ ಹುದುಗಿದೆ. ವೈರಾಗ್ಯ ಆಸೆಗಳ ಹಿಡಿತದಲ್ಲಿ ನಮ್ಮನ್ನು ನಾವು ನಿಯಂತ್ರಿಸಿಕೊಂಡರೆ ಜೀವನ ಸಾರ್ಥಕ ಎಂದರು.
ದಿವಿಗೆಯ ಹಾದಿಯಲ್ಲಿ ನಡೆದರೆ ಅಂಧಕಾರ ಕಳಿಚಿ ಹೊಸಬೆಳಕು ಮೂಡಲು ಸಾಧ್ಯ. ಭಾದ್ರಪದ ಮಾಸದಲ್ಲಿ ಮನಭಾವ ಭದ್ರವಾಗಿಸಿಕೊಳ್ಳಬೇಕು. ಶ್ರಾವಣ ಮಾಸ ಬರೀ ನಮ್ಮ ಶ್ರವಣಕ್ಕೆ ಸೀಮಿತವಲ್ಲ.ಅದು ಸಮೃದ್ಧಿಯ ಸಂದೇಶ ಫಸರಿಸುವ ಮಾಸವಾಗಿದೆ. ಮನಮನಗಳಲ್ಲಿ ನವತನದ ಸಂಭ್ರಮ ಶ್ರಾವಣದಲ್ಲಿ ಆರಂಭವಾಗುತ್ತದೆ. ತಿಂಗಳ ಪಯರ್ಂತ ಮನೆಮನಗಳೆಲ್ಲ ಪೂಜಾ ಭಕ್ತಿ,ದೇವದೇವತೆಗಳ ಆರಾಧನಾ ಮಹೋತ್ಸವ ಸಾಗುತ್ತವೆ. ಇದು ಭಾರತೀಯ ವೈವಿಧ್ಯ ಸಂಸ್ಕøತಿಯ ಶ್ರೀಮಂತಿಕೆ ಎತ್ತಿ ತೋರಿಸುತ್ತದೆ ಎಂದು ಸಿಗ್ದರೇಣುಕ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸಕ್ಕೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ತಾಯಂದಿರಿಗೆ ಶ್ರಾವಣ ಬಂತೆಂದರೆ ಸಾಕು. ಸಂಭ್ರಮಿಸಿ ಸಂತಸ ಹಂಚಿಕೊಳ್ಳುತ್ತಾರೆ.ಶ್ರಾವಣ ಪವಿತ್ರ ಹಬ್ಬ. ಅದರಲ್ಲೂ ತವರು ಮನೆಯ ಸೊಗಡು ನಾರಿ ಕುಲಕ್ಕೆ ಅನನ್ಯವಾಗಿ ಕಂಗೊಳಿಸುತ್ತದೆ. ಶ್ರಾವಣ ಮಾಸದಲ್ಲಿ ಹತ್ತುಹಲವಾರು ಹಬ್ಬಗಳಿಗೆ ಚಾಲನೆ ಲಭಿಸುತ್ತಿದೆ. ಒಡೆದ ಮನಸ್ಸು ಒಂದುಗೂಡಿಸುವದು,ಸಾಮರಸ್ಯದ ತೈಲ ಸೇರಿಸುವುದು, ಸಂಬಂಧ, ಬಾಂಧವ್ಯ ಗಟ್ಟಿಗೊಳಿಸುವುದೇ ಹಬ್ಬಗಳ ಉದ್ದೇಶವಾಗಿದ್ದು ಅಪಾರ ಮಹಿಮೆಯ ರಾಮಲಿಂಗೇಶ್ವರನ ಪುಣ್ಯ ಕ್ಷೇತ್ರದ ಅಂಗಳದಲ್ಲಿ ಆಧ್ಯಾತ್ಮಿಕ ಪುರಾಣ ಪ್ರವಚನಗಳು ಪ್ರತಿ ವರ್ಷ ಇಲ್ಲಿ ಸಾಗಿಬರುತ್ತಿರುವುದು ಸಂತಸದ ವಿಚಾರವಾಗಿದೆ. ಮಹಾತ್ಮರ ಪವಿತ್ರ ಚರಿತ್ರೆ ಆಲಿಸಿ ಮನಸ್ಸಿನಲ್ಲಿರುವ ದುಷ್ಟ ದೃಷ್ಟಿ ಅಳಿಸಿ ಜೀವನ ಸ್ವಾರಸ್ಯ ಭದ್ರಪಡಿಸಿಕೊಳ್ಳಬೇಕು. ಪುರಾಣ ಶಾಸ್ತ್ರದಲ್ಲಿ ಜೀವಾತ್ಮ ಇದೆ. ಲೌಕಿಕ ವಿಚಾರಗಳಿಂದ ಹೊರಬಂದು ಧರ್ಮಾನುಷ್ಟಾನಗಳನ್ನು ಅನುಸರಿಸಬೇಕು. ದುರ್ಗಣಗಳಿಂದ,ಕೇಶ ಕರ್ಮಗಳಿಂದ ವಿಮುಕ್ತರಾಗಿ ಜೀವನ ಪಥ ಶುದ್ಧೀಕರಣ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ನುಡಿದರು.
ಅಖಿಲ ಭಾರತ ವೀರಶೈವ ಮಹಾಸಂಘದ ಆಲಮಟ್ಟಿ ಶಾಖೆ ಅಧ್ಯಕ್ಷ ಯಶವಂತ ಮರಡಿ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಅಶ್ವಿನಿ ಪಟ್ಟಣಶೆಟ್ಟಿ, ಎ.ಎಸ್.ವಕ್ರ,ಚಂದ್ರಶೇಖರ ಪಳನಿ,ಮಹಾಂತೇಶ ಒಡೆಯರ,ಎನ್.ಆರ್.ಜಾಲಿಬೆಂಚಿ,ಸೋಮಲಿಂಗ ಬಿದರಿ ಇತರರಿದ್ದರು.
ಗವಾಯಿ ಮಲ್ಲಿಕಾರ್ಜುನ ಹಿರೇಮಠ ಪ್ರಾರ್ಥಿಸಿದರು. ಟಿ.ಬಿ.ಕರದಾನಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರವಚನಕಾರ ಹಾವೇರಿ ಜಿಲ್ಲೆಯ ನೆಗಳೂರಿನ ಗದಿಗೆಯ್ಯ ಹಿರೇಮಠ, ಸಂಗೀತ ಸೇವಕ ಮಲ್ಲಿಕಾರ್ಜುನ ಹಿರೇಮಠ,ಗವಾಯಿ,ತಬಲಾವಾದಕ ಎಚ್.ಕೆ.ಮಕಾಂದಾರ ಸೇರಿದಂತೆ ಅತಿಥಿ ಗಣ್ಯರನ್ನು ಸತ್ಕರಿಸಲಾಯಿತು.
ಪ್ರವಚನದ ಬಳಿಕ ಜನತೆಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭೇದ ಭಾವ ಇಲ್ಲದೇ ಅನ್ನದಾಸೋಹದಲ್ಲಿ ಜನ ಭಾಗವಹಿಸಿ ಪ್ರಸಾದ್ ಸ್ವೀಕರಿಸಿದರು.