ಪ್ರಯಾಣ ನಿರ್ಬಂಧ ದ.ಆಫ್ರಿಕಾ ಅಸಮಾದಾನ

ಡರ್ಬನ್ (ದಕ್ಷಿಣ ಆಫ್ರಿಕಾ), ನ.೨೭- ಕೊರೊನಾ ಸೋಂಕಿನ ಹೊಸ ಅಪಾಯಕಾರಿ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಮೇಲೆ ಸಹಜವಾಗಿಯೇ ಬ್ರಿಟನ್, ಅಮೆರಿಕಾ ಸೇರಿದಂತೆ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಪ್ರಯಾಣ ನಿರ್ಬಂಧವನ್ನು ಹೇರಿದೆ. ಆದರೆ ಇದೀಗ ನಿರ್ಬಂಧದ ವಿರುದ್ಧ ದ.ಆಫ್ರಿಕಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಆಫ್ರಿಕಾ ಆರೋಗ್ಯ ಸಚಿವ ಜೊ ಫಾಹ್ಲಾ, ಕೊರೊನಾ ವಿಚಾರದಲ್ಲಿ ನಾವು ಅತ್ಯಂತ ಪಾರದರ್ಶಕ ರೀತಿಯಲ್ಲಿ ಇತರರೊಂದಿಗೆ ವ್ಯವಹರಿಸುತ್ತಿದ್ದೇವೆ. ಆದರೆ ನಮ್ಮ ರಾಷ್ಟ್ರದ ಮೇಲೆ ಪ್ರಯಾಣ ನಿರ್ಬಂಧ ಹೇರಿರುವುದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ)ಯ ನಿಯಮ ಹಾಗೂ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ. ಬ್ರಿಟನ್‌ನ ಈ ನಿರ್ಧಾರವು ಎರಡೂ ದೇಶಗಳ ಪ್ರವಾಸೋದ್ಯಮ, ಕೈಗಾರಿಕೆಗಳು ಮತ್ತು ವ್ಯವಹಾರಗಳಿಗೆ ಹಾನಿ ತರಲಿದ್ದು, ಈ ಬಗ್ಗೆ ನಾವು ಆತಂಕ ಹೊಂದಿದ್ದೇವೆ ಎಂದು ಇದೇ ವೇಳೆ ದ.ಆಫ್ರಿಕಾದ ವಿದೇಶಾಂಗ ಸಚಿವ ನಲೆಡಿ ಪಂಡೋರ್ ಕೂಡ ತಿಳಿಸಿದ್ದಾರೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಫೋನ್ ಸಂಭಾಷಣೆಯ ಮೂಲಕ ಮಾತುಕತೆ ನಡೆಸಿದ್ದಾರೆ. ಇನ್ನು ಅಪಾಯಕಾರಿ ಎಂದೇ ಪರಿಗಣಿಸಲಾಗಿರುವ ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ಬೊಟ್ಸ್ವಾನಾ, ಲೆಸೊಥೊ, ಇಸ್‌ವೈಥಿನಿ, ಜಿಂಬಾಬ್ವೆ ಹಾಗೂ ನಮೀಬಿಯಾ ಮುಂತಾದ ರಾಷ್ಟ್ರಗಳಿಂದ ಬರುವ ವಿಮಾನಗಳನ್ನು ಬ್ರಿಟನ್ ಈಗಾಗಲೇ ನಿರ್ಬಂಧಿಸಿದೆ. ಅಲ್ಲದೆ ದಕ್ಷಿಣ ಅಫ್ರಿಕಾದ ವಿಮಾನಗಳಿಗೆ ನಿರ್ಬಂಧ ಹೇರಲು ಯುರೋಪಿಯನ್ ಯೂನಿಯನ್ (ಇಯು) ಕೂಡ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಇದೀಗ ಅಮೆರಿಕಾ ಕೂಡ ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾದ ಎಂಟು ರಾಷ್ಟ್ರಗಳಿಗೆ ಪ್ರಯಾಣ ನಿರ್ಬಂಧ ಹೇರಿದೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಸೇರಿದಂತೆ ಹಲವು ವಿಭಾಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗಿದೆ.