ಪ್ರಯಾಣಿಕ ವಾಹನಗಳ ತೆರಿಗೆ ಪಾವತಿಗೆ ಅವಧಿ ವಿಸ್ತರಿಸಿ ಸರ್ಕಾರದ ಅಧಿಕೃತ ಆದೇಶ

ಬೆಂಗಳೂರು, ಏ. 12-ಸಾರಿಗೆ ನೌಕರರ ಮುಷ್ಕರ ನಿರತರಾಗಿರುವ ಹಿನ್ನಲೆಯಲ್ಲಿಖಾಸಗಿ ವಾಹನ ಮಾಲೀಕರು ಸರಕಾರದ ಕೋರಿಕೆಗೆ ಸ್ಪಂದಿಸಿ ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯಿದೆ 1957ರ ಕಲಂ4(1) ನಿಯಮಗಳನ್ನು ಸಡಿಲಗೊಳಿಸಿ ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯವಾಗುವಂತೆ 15.04.2021ರೊಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ದಿನಾಂಕ: 30.04.2021 ರವರೆಗೆ ಅವಧಿಯನ್ನು ವಿಸ್ತರಿಸಿ ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ತವ್ಯಕ್ಕೆ ಹಾಜರಾಗಿ ಸವದಿ ಮನವಿ

ಪ್ರಸ್ತುತ ಕೋವಿಡ್ 2ನೇ ಅಲೆಯ ಅಪಾಯದ ಸಂದರ್ಭ ಎದುರಾಗಿದೆ. ಅಷ್ಟೇ ಅಲ್ಲ ಯುಗಾದಿ ಪ್ರಯುಕ್ತ ನೌಕರ ವರ್ಗದವರು ಮತ್ತು ವಿದ್ಯಾರ್ಥಿಗಳು, ಮತ್ತಿತರರು ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುವ ಪ್ರಯುಕ್ತ ಅವರಿಗೆ ಅನುಕೂಲವಾಗಲು ನೌಕರರು ಕೂಡಲೇ ಕರ್ತವ್ಯಕ್ಕೆ ಮರಳಬೇಕೆಂದು ಮನವಿ ಮಾಡಿದ್ದಾರೆ.

ಚುನಾವಣಾ ನೀತಿ ಸಂಹಿತೆಯ ಅವಧಿ ಮುಕ್ತಾಯಗೊಂಡ ನಂತರ ನಮ್ಮ ನೌಕರರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.