ಪ್ರಯಾಣಿಕರ ಸೋಗಿನಲ್ಲಿ ಬಸ್ ಗಳಲ್ಲಿ ಕಳವು ನಾಲ್ವರು ಸೆರೆ

ಬೆಂಗಳೂರು, ನ.೨೨; ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು ೩೧೮ ಗ್ರಾಂ ತೂಕದ ಆಭರಣ, ೩೦ ಸಾವಿರ ರೂ.ನಗದು ವಶಪಡಿಸಿಕೊಂಡಿದ್ದಾರೆ.
ನಗರದ ಅಪ್ರೋಜ್ (೪೦), ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಲೋಹಿತ್ (೨೧), ಬೆಂಗಳೂರು ರವಿ (೫೨), ಬಳ್ಳಾರಿ ಜಿಲ್ಲೆಯ ಅಕ್ಷಯ್ ಸುಶೀಲೇಂದ್ರರಾವ್ ಸಂಕನೂರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಅ. ೧೯ರಂದು ಮಧ್ಯಾಹ್ನ ೧೨ ಗಂಟೆಗೆ ಹಾಸನದಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ ಮಧ್ಯಾಹ್ನ ೩ ಗಂಟೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬರ ಬ್ಯಾಗ್ ಕಾಣೆಯಾಗಿತ್ತು.
ಬ್ಯಾಗ್‌ನಲ್ಲಿ ೫೦ ಗ್ರಾಂ ತೂಕದ ಚಿನ್ನದ ಸರ ಮತ್ತು ೫೦ ಸಾವಿರ ರೂ.ನಗದು ಹಣವಿತ್ತು. ಈ ಬಗ್ಗೆ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಉಪ್ಪಾರಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಿ.ಬಿ.ಶಿವಸ್ವಾಮಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಉಪ್ಪಾರಪೇಟೆ, ಕಾಟನ್ ಪೇಟೆ, ಕೆಂಗೇರಿ, ಬ್ಯಾಟರಾಯನಪುರ ಮತ್ತು ವಿಜಯನಗರ ಕಡೆಗಳಲ್ಲಿ ಕಳವು ಮಾಡಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಆರೋಪಿಗಳಿಂದ ೧೬,೬೦,೦೦೦ ರೂ.ಬೆಲೆ ಬಾಳುವ ೩೧೮ ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು ೩೦ ಸಾವಿರ ರೂ.ನಗದು, ನಿಕೋನ್ ಕ್ಯಾಮರಾವನ್ನು ವಶಪಡಿಸಿಕೊಳ್ಳಲಾಗಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯ ೨ ಕಳವು ಪ್ರಕರಣ, ೧ ಕನ್ನ ಕಳವು ಪ್ರಕರಣ, ೧ ವಂಚನೆ ಪ್ರಕರಣ, ಕಾಟನ್ ಪೇಟೆ ಪೊಲೀಸ್ ಠಾಣೆಯ ೨ ಕಳವು ಪ್ರಕರಣಗಳು , ಕೆಂಗೇರಿ ಪೊಲೀಸ್ ಠಾಣೆ ೨ ಮನೆ ಕಳವು ಪ್ರಕರಣಗಳು ಮತ್ತು ಬ್ಯಾಟರಾಯನಪುರ ಹಾಗೂ ವಿಜಯನಗರ ಪೊಲೀಸ್ ಠಾಣೆಯ ತಲಾ ಒಂದೊಂದು ಕಳವು ಪ್ರಕರಣಗಳು ಒಟ್ಟು ೧೦ ಪ್ರಕರಣಗಳನ್ನು ಪತ್ತೆ ಮಾಡಿ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಂದನೇ ಆರೋಪಿ ಅಪ್ರೋಜ್ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಹಾಗೂ ಮೂರನೇ ಆರೋಪಿ
ರವಿ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣಗಳು ದಾಖಲಾಗಿದ್ದು, ವಿಚಾರಣೆಯ ಹಂತದಲ್ಲಿದೆ ಎಂದು ಹೇಳಿದರು.

ಕಳ್ಳರ ಜತೆ ಶಾಮೀಲು ಪೊಲೀಸರು ಜೈಲಿಗೆ
ಬೆಂಗಳೂರು,ನ.೨೨-ಕಳ್ಳರನ್ನು ಹಿಡಿಯಬೇಕಾದವರು ಪೊಲೀಸರು ದುಡ್ಡಿಗಾಗಿ ಕಳ್ಳತನಕ್ಕೆ ಇಳಿದು ಹಲಸೂರುಗೇಟ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಅಸಲಿ ಪೊಲೀಸರು ಕಳ್ಳರ ಜತೆಗೆ ಸೇರಿಕೊಂಡು ನಕಲಿ ದಾಳಿ ಮಾಡಿ ಚಿನ್ನದ ಆಭರಣಗಳನ್ನು ದೋಚಿ ಸಿಕ್ಕಿಬಿದ್ದಿರುವ ಅಸಲಿ ಪೊಲೀಸರು ದರೋಡೆಕೋರರ ಜತೆಗೆ ಜೈಲು ಪಾಲಾಗಿದ್ದಾರೆ.
ಕಳ್ಳರು ಮತ್ತು ಪೊಲೀಸರು ಜತೆಗೂಡಿ ನಕಲಿ ಪೊಲೀಸ್ ರೇಡ್ ಮಾಡಿರುವ ದರೋಡೆಯ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕಳೆದ ನ.೧೧ರಂದು ನಗರ್ತಪೇಟೆಯ ಅಣ್ಣಯ್ಯ ಬೀದಿಯಲ್ಲಿ ಚಿನ್ನದ ಅಂಗಡಿಗೆ ಏಕಾಏಕಿ ಪೊಲೀಸರು ದಾಳಿ ಮಾಡಿದ್ದರು. ನೀನು ಪರವಾನಗಿ ಇಲ್ಲದೇ ಅಂಗಡಿ ನಡೆಸಲಾಗಿದೆಯೇ ಕಳವು ಚಿನ್ನ ಖರೀದಿಸಿರುವ ಮಾಹಿತಿ ಇದೆ ಎಂದು ಸಿಸಿಬಿ ಪೊಲೀಸರ ಶೈಲಿಯಲ್ಲೇ ದಾಳಿ ನಡೆಸಿ ಬರೋಬ್ಬರಿ ೯ ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು.
ದಾಳಿ ನಡೆದ ಬಳಿಕ ಅಂಗಡಿ ಮಾಲೀಕ ಕಾರ್ತಿಕ್ ಅವರು ಪರಿಚಿತ ಪೊಲೀಸರ ಮೂಲಕ ದಾಳಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ದಾಳಿ ನಡೆಸಿದ್ದು ಅಸಲಿ ಪೊಲೀಸರಲ್ಲ, ದರೋಡೆಕೋರರು ಎಂಬ ಸಂಗತಿ ಅರಿವಿಗೆ ಬಂದಿತ್ತು. ಕೂಡಲೇ ಹೋಗಿ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರ ಸೋಗಿನಲ್ಲಿ ದರೋಡೆಕೋರರು ದಾಳಿ ನಡೆಸಿ ಚಿನ್ನಾಭರಣ ಕದ್ದಿದ್ದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡಸಿದ್ದರು.
ಪ್ರಕರಣದ ತನಿಖೆ ನಡೆಸಿದ ಹಲಸೂರುಗೇಟ್ ಪೊಲೀಸರು ನಕಲಿ ದಾಳಿ ಮಾಡಿದ್ದ ಏಳು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಇಬ್ಬರು ಅಸಲಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ನಕಲಿ ದಾಳಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಪೇದೆ ಅಶೋಕ್ ಸೇರಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಕಾನ್ ಸ್ಟೇಬಲ್ ಚೌಡೇಗೌಡ ತಲೆಮರೆಸಿಕೊಂಡಿದ್ದಾನೆ.

ಮಕ್ಕಳೆದುರೇ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು,ನ.೨೨-ಮಕ್ಕಳೆದುರೇ ತಾಯಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಂದ್ರಲೇಔಟ್‌ನ ಆರುಂಧತಿ ನಗರದಲ್ಲಿ ನಡೆದಿದೆ.
ಆರುಂಧತಿ ನಗರದ ಫಾತೀಮಾ (೩೦) ಆತ್ಮಹತ್ಯೆಗೆ ಯತ್ನಿಸಿದವರು. ವಿಷಸೇವಿಸಿ ಅಸ್ವಸ್ಥಳಾದ ಫಾತೀಮಾರನ್ನು ಆಸ್ಪತ್ರೆಗೆ ದಾಖಲಿಸಿದ್ದು ಆಕೆ ಜೀವನ್ಮರಣದ ಹೋರಾಟ ನಡೆಸಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಕೊಲ್ಲಿ ರಾಷ್ಟ್ರ, ದುಬೈ, ಕುವೈತ್ ನಲ್ಲಿ ಮನೆ ಕೆಲಸ ಮಾಡಿ ಬ್ಯಾಂಕಿಗೆ ಫಾತೀಮಾ ಹಣ ಜಮಾ ಮಾಡಿದ್ದು
ಅಲ್ಲಿಂದ ವಾಪಸ್ ಆಗಿ ಇತ್ತೀಚೆಗೆ ಬ್ಯಾಂಕ್ ಹಣ ಪರಿಶೀಲಿಸಿದಾಗ ಹಣ ಖಾಲಿಯಾಗಿರುವುದು ಬೆಳಕಿಗೆ ಬಂದಿದೆ.
ಸಂಪಾದಿಸಿದ ಹಣವನ್ನೆಲ್ಲ ತಾಯಿ ರಫೀಕಾ ಬೇಗಂ, ಅಣ್ಣ ಜಾಫರ್, ಅಣ್ಣನ ಪತ್ನಿ ಸಮೀನಾ, ಅಕ್ಕ ಆಯೇಷಾ ಬಾನು ಮತ್ತು ಆಕೆಯ ಪುತ್ರ ಸೈಯದ್ ಕಲೀಲ್ ದುರ್ಬಳಕೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಹಣ ವಾಪಸ್ ಕೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಫಾತೀಮಾ ತನ್ನ ಕುಟುಂಬಸ್ಥರ ಮೇಲೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಫಾತೀಮಾಳಿಗೆ ನ್ಯಾಯ ಕೊಡಿಸಲಿಲ್ಲ. ಇದರಿಂದ ಮನನೊಂದ ಫಾತೀಮಾ ತನ್ನ ಮಕ್ಕಳ ಎದುರು ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಫಾತೀಮಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಚಂದ್ರಲೇಔಟ್ ಪೊಲೀಸರಿಗೆ ಸೂಚಿಸಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಲಾರಿ – ಬೈಕ್‌ಗೆ ಡಿಕ್ಕಿ ವಿದ್ಯಾರ್ಥಿ ಸಾವು
ಬೆಂಗಳೂರು, ನ.೨೨-ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ ಚಕ್ರದಡಿ ಸಿಲುಕಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಡಿ ಕ್ರಾಸ್ ಸಮೀಪದ ಪಿಎಸ್‌ಐ ಜಗದೀಶ್ ವೃತ್ತದಲ್ಲಿ ಘಟನೆಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೇಮಂತ್ (೧೯) ಮೃತಪಟ್ಟವರು. ನಗರದಿಂದ ಹಣಬೆ ಗ್ರಾಮಕ್ಕೆ ಬೈಕ್‌ನಲ್ಲಿ ಹೇಮಂತ್ ಬರುವಾಗ ಮಾರ್ಗಮಧ್ಯದ ಕ್ರಾಸ್ ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ.
ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಜಗದೀಶ್ ವೃತ್ತದಲ್ಲಿ ದಾಬಸ್ ಪೇಟೆ, ಬೆಂಗಳೂರು ಮತ್ತು ದೇವನಹಳ್ಳಿ ರಸ್ತೆಗಳು ಒಂದೇ ಕಡೆ ಸಂಪರ್ಕಿಸುತ್ತವೆ. ಈ ವೃತ್ತದಲ್ಲಿ ಸಂಚಾರಿ ಸಿಗ್ನಲ್ ಅಳವಡಿಸದೆ ಇರುವುದು ಮತ್ತು ರೈಲ್ವೆ ಮೇಲ್ಸೇತುವೆಯಿಂದ ಇಳಿಯುವಾಗ ತಕ್ಷಣವೇ ತಿರುವು ಇರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕೊಂದು ಶವದ ಮೇಲೆ ವಿಕೃತಕಾಮಿ ಅತ್ಯಾಚಾರ
ಬೆಂಗಳೂರು,ನ.೨೨-ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯ ಕತ್ತು ಹಿಸುಕಿ ಕೊಲೆಗೈದು ಶವದ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ವಿಕೃತ ಕಾಮಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಂಧ್ರಪ್ರದೇಶದ ಎದ್ದುಲೋಳ್ಳಪಲ್ಲಿ ಮೂಲದ ಕೆ.ಎನ್. ಶಂಕರಪ ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಅ.೧೯ರಂದು ಚಿಂತಾಮಣಿ ತಾಲೂಕಿನ ಕೋನಾಪುರ ಗ್ರಾಮದ ೨೭ ವರ್ಷದ ಗೃಹಿಣಿ ತಮ್ಮ ಜಮೀನಿನಲ್ಲಿ ಕಡಲೆಕಾಯಿ ಬಿಡಿಸುತ್ತಿದ್ದಾಗ ಹೊಂಚು ಹಾಕಿ ಕಾಯುತ್ತಿದ್ದ ಕೆ.ಎನ್.ಶಂಕರಪ್ಪ ಜಮೀನಿನಲ್ಲಿದ್ದ ಒಂಟಿ ಮಹಿಳೆ ಬಳಿ ಬಂದು,ಪರಿಚಯದ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆಗ ಗೃಹಿಣಿ ವಿರೋಧ ವ್ಯಕ್ತಪಡಿಸಿದ್ದ ಕಾರಣ ಆಕೆಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ನಂತರ ಶವದ ಮೇಲೆ ಅತ್ಯಾಚಾರವೆಸಗಿ ವಿಕೃತ ಕಾಮ ಮೆರೆದಿದ್ದನು. ಕೊಲೆ ನಡೆದು ಬರೋಬ್ಬರಿ ಒಂದು ತಿಂಗಳಲ್ಲಿ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಕೆ.ಎನ್. ಶಂಕರಪ್ಪ ಆಂಧ್ರಪ್ರದೇಶದ ಎದ್ದುಲೋಳ್ಳಪಲ್ಲಿಯಿಂದ ಸ್ನೇಹಿತನ ಮನೆಯಿದ್ದ ಕೋನಾಪುರಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ಇರುವುದಾಗಿ ಹೇಳಿದ್ದನು. ಆದರೆ ಕೂಲಿ ಕೆಲಸಕ್ಕೆ ಹೋಗುವುದರ ಬದಲು ಕೆಲಸದಲ್ಲಿ ನಿರತವಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಹೋಗಿ ಕೊಂದು ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದನು.
ಆರೋಪಿ ಕೆ.ಎನ್.ಶಂಕರಪ್ಪ, ಮೊದಲೇ ಕಳೆದ ಎರಡು ವರ್ಷಗಳ ಹಿಂದೆ ಹೆಂಡತಿಯನ್ನ ತೊರೆದು ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದನು. ಈ ಪಾಪಿಯ ವಿಕೃತಿಯನ್ನ ಕೇಳಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ.ಇದೇ ರೀತಿ ಹಿಂದೆ ಎಲ್ಲಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನಾ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಿಳೆಗೆ ಕಾರು ಡಿಕ್ಕಿ ಚಾಲಕ ಪರಾರಿ
ಬೆಂಗಳೂರು,ನ.೨೨-ಸ್ಥಳಾವಕಾಶವಿಲ್ಲದ ಜಾಗದಲ್ಲಿ ಕಾರು ನುಸುಳಿಸಿದ ಚಾಲಕ ರಸ್ತೆಯಲ್ಲಿ ನಿಂತಿರುವ ಮಹಿಳೆಗೆ ಗುದ್ದಿದ್ದನ್ನು ಪ್ರಶ್ನಿಸಲು ಬಂದ ವ್ಯಕ್ತಿ ಬಾನೆಟ್ ಮೇಲೆ ಏರಿದರೂ ಕಾರ್ ನಿಲ್ಲಿಸಿದೇ ಚಲಾಯಿಸಿಕೊಂಡು ಹೋಗಿರುವ ಘಟನೆ ಯಲಹಂಕದ ನಾಗೇನಹಳ್ಳಿ ಗೇಟ್ ಬಳಿ ನಡೆದಿದೆ.
ಎಕ ಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಬಂದಿರುವ ಚಾಲಕ ಮಹಿಳೆ ಗುದ್ದಿ, ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು ಎಳೆದೊಯ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕಾರು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?
ಯಲಹಂಕದ ನಾಗೇನಹಳ್ಳಿ ಗೇಟ್‌ನ ದೊಡ್ಡಬಳ್ಳಾಪುರ, ಯಲಹಂಕ ಹೆದ್ದಾರಿಯಲ್ಲಿ ಒನ್‌ವೇ ರಸ್ತೆಯಲ್ಲಿ ಕಾರು ಚಾಲಕನೊಬ್ಬ ಜಾಗ ಇಲ್ಲದೆ ಇದ್ದರು ಕಾರು ಮುಂದಕ್ಕೆ ಹೋಗಲು ಯತ್ನಿಸುತ್ತಾನೆ. ಇದರಿಂದ ಸಾಲುಗಟ್ಟಿ ನಿಂತ ವಾಹನ ಸವಾರರಿಗೆ ಕೆಲವು ಸಮಯ ಕಿರಿಕಿರಿ ಉಂಟಾಗಿದೆ. ಕಾರು ಚಾಲಕ ಕಿರಿಯಾದ ಜಾಗದಲ್ಲಿ ಕಾರು ನುಗ್ಗಿಸಿ ಮತ್ತೊಂದು ಕಾರಿಗೆ ತಾಕಿಸಿದ್ದಾನೆ. ಇದಕ್ಕೆ ಕೋಪಗೊಂಡ ಮತ್ತೊಂದು ಕಾರಿನಲ್ಲಿರುವ ವ್ಯಕ್ತಿ ಈತನನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾನೆ. ಭಯಗೊಂಡ ಕಾರಿನ ಚಾಲಕ ಆತನ ಮೇಲೆ ಕಾರನ್ನು ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.
ಆತುರವಾಗಿ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳವ ಈ ವೇಳೆ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಗುದ್ದಿದ್ದಾನೆ. ಕಾರನ್ನು ತಡೆಯಲು ಯತ್ನಿಸಿದ ವ್ಯಕ್ತಿ ಕಾರಿನ ಬಾನೆಟ್ ಹತ್ತಿದ್ದಾನೆ. ಭಯಗೊಂಡ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಇದರಿಂದ ವ್ಯಕ್ತಿ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದಾನೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರು ಚಾಲಕ ರಭಸವಾಗಿ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.


ಬಸ್ ಹಳ್ಳಕ್ಕೆ; ೨೦ ಮಂದಿಗೆ ಗಾಯ
ಬೆಂಗಳೂರು,ನ.೨೨-ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್ಸೊಂದು ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟು, ಹಲವು ಪ್ರಯಾಣಿಕರು ಗಾಯಗೊಂಡ ದಾರುಣ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡೆಮಾರನಹಳ್ಳಿಯಲ್ಲಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಟಿಪ್ಪು(೪೦) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ೨೦ಕ್ಕೂ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಸುಗಮ ಟೂರಿಸ್ಟ್ ಸಂಸ್ಥೆಗೆ ಸೇರಿದ ಈ ಬಸ್ ಶನಿವಾರ ರಾತ್ರಿ ವಿಟ್ಲದಿಂದ ಪ್ರಯಾಣಿಕರನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೊರಟಿತ್ತು. ಇಂದು ಮುಂಜಾವ ೫ ಗಂಟೆ ಸುಮಾರಿಗೆ ಕುದೂರು ಠಾಣಾ ವ್ಯಾಪ್ತಿಯ ಗುಡೆಮಾರನಹಳ್ಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುದೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.