ಪ್ರಯಾಣದ ದುಪ್ಪಟ್ಟು ದರಕ್ಕೆ ಬ್ರೇಕ್: ವಾಹನ ಸೀಜ್ ಎಚ್ಚರಿಕೆ

(ಸಂಜೆವಾಣಿ ವಾರ್ತೆ)
ಶಹಾಪುರ:ಎ.8:ಕೆ.ಎಸ್.ಆರ್.ಟಿ.ಸಿ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಹಿನ್ನಲೆಯಲ್ಲಿ ಶಹಾಪುರ ನಗರದಿಂದ ಕಲಬುರಗಿ, ವಿಜಯಪುರ, ರಾಯಚೂರ, ಯಾದಗಿರಿ ಹಾಗೂ ಇತರೆ ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ಪ್ರಯಾಣಿಕರು, ಖಾಸಗಿ ವಾಹನಗಳಿಗೆ ದುಬಾರಿ ಪ್ರಯಾಣದರ ನೀಡಿ ಹೊಗಬೇಕಾದ ಪರಿಸ್ಥಿತಿ ಉಂಟಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾಗ ನಗರ ಸಿ.ಪಿ.ಐ ಚೆನ್ನಯ್ಯ ಹೀರೆಮಠರವರು ಸಕಾಲದ ಕಾಳಜಿಯಿಂದ ಯಾದಗಿರಿ ಆರ್.ಟಿ.ಓ ಅಧಿಕಾರಿ ವೆಂಕಣ್ಣನವರೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದರು.
ಸರಿಯಾದ ಸಮಯಕ್ಕೆ ನಗರಕ್ಕೆ ಆಗಮಿಸಿದ ಆರ್.ಟಿ.ಓ ಅಧಿಕಾರಿಗಳು ಮತ್ತು ಸ್ಥಳಿಯ ಪೋಲಿಸರು, ಹೊರ ಜಿಲ್ಲೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ವಾಹನಗಳಿಗೆ ದುಬಾರಿ ಪ್ರಯಾಣದರಕ್ಕೆ ಬ್ರೇಕ್ ಹಾಕಿದರು.
ಅಲ್ಲದೆ ಅನಿವಾರ್ಯ ಪರಸ್ಥಿತಿಯಲ್ಲಿ ಆಸ್ಪತ್ರೆ ಹೆÀರಿಗೆ ಮತ್ತು ರೋಗ ಬಾದೆಗಳಿಂದ ಬಳಲುವ ವಯೋ ವೃದ್ದರಿಗೆ ದುಪ್ಪಟ್ಟು ಪ್ರಯಾಣದರ ಸುಲಿಗೆ ಮಾಡಿದಲ್ಲಿ ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಈ ಕಾರ್ಯದಿಂದ ನಿಟ್ಟುಸಿರು ಬಿಟ್ಟ ಪ್ರಯಾಣಿಕರು ಮರಳಿ ತಮ್ಮ ಊರುಗಳಿಗೆ ಹೋಗಲು ಅನುಕೂಲವಾಯಿತು. ಖಾಸಗಿ ವಾಹನಗಳು ಪ್ರತಿ ಪ್ರಯಾಣಿಕರಿಂದ 200 ರೂ ದರ ವಸೂಲಿಗೆ ಮುಂದಾಗಿದ್ದಾರೆ ಎಂದು ರೈತ ಮುಖಂಡ ಚೆನ್ನಪ್ಪ ಆನೆಗುಂದಿ ಆಕ್ಷೇಪಣೆ ವ್ಯಕ್ತಪಡಿಸಿ ನೊಂದ ಪ್ರಯಾಣಿಕರ ಪ್ರಯಾಣಕ್ಕೆ ಸಹಕಾರಿಯಾದರು.
ಈ ಸಂಧರ್ಭದಲ್ಲಿ ಪೋಲಿಸ್ ಸಿಬ್ಬಂದಿಯವರು, ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು.