ಪ್ರಯತ್ನಶೀಲತೆಗೆ ಮಾತ್ರ ಅದೃಷ್ಟ ಒಲಿಯುತ್ತದೆ;  ಎಚ್ ಬಿ ಮಂಜುನಾಥ್  

ದಾವಣಗೆರೆ.ಮಾ.15. ಪ್ರಯತ್ನಶೀಲತೆಗೆ ಮಾತ್ರ ಅದೃಷ್ಟವೆಂಬುದು ಒಲಿಯುವುದಾಗಿದ್ದು  ಸತ್ಪುರುಷರ, ಜ್ಞಾನಿಗಳ ಸಹಚರ್ಯದ ಪ್ರಯತ್ನ ಮಾಡಿದರೆ ಮಾತ್ರ ಅವರ ಮೌಲ್ಯಯುತ ನುಡಿ ಸಂದೇಶಗಳು ನಮಗೆ ಪ್ರಾಪ್ತವಾಗುತ್ತದೆ ಎಂದು ಹಿರಿಯ ಪತ್ರಕರ್ತ,ಆಧ್ಯಾತ್ಮಿಕ ಚಿಂತಕ ಹೆಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.     ಅವರು ನಗರದ ನಿರಂತರ ಯೋಗ ಕೇಂದ್ರದ ವತಿಯಿಂದ  ಏರ್ಪಾಡಾಗಿದ್ದ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಪುಣ್ಯ ಸ್ಮರಣ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರ  ಬದುಕು ಬರಹ ಪುಸ್ತಕ ಬಿಡುಗಡೆ ನೆರವೇರಿಸಿ ನುಡಿ ನಮನ ನೀಡುತ್ತಾ ಬದುಕೆಂಬುದು ಅನುಭವಗಳ  ಸಾಗರವಾಗಿದ್ದು ಬದುಕಿನ ಸಿರಿವಂತಿಕೆ ಇರುವುದು ವಿಶ್ವ ಚಿಂತನೆಯಲ್ಲಿ ಮತ್ತು  ಸತ್ಯಶೋಧನೆಯಲ್ಲಿ ಎಂಬ ಸಿದ್ದೇಶ್ವರ ಸ್ವಾಮಿಗಳವರ ಅಂತಿಮ ಅಭಿವಂದನಾ ಸಂದೇಶದ ಸಾಲುಗಳನ್ನು ಉದಾಹರಿಸುತ್ತಾ ಕಣ್ಣಿಗೆ ಕಾಣುವ ಆಕಾಶ, ಪರ್ವತ, ಸಮುದ್ರಾದಿಗಳು, ಕಣ್ಣಿಗೆ ಕಾಣದ ಗಾಳಿ, ನಿಸರ್ಗ,ಪ್ರಕೃತಿ  ಮುಂದೆ ನಮ್ಮ ಆಸ್ತಿ ಅಂತಸ್ತು ದೊಡ್ಡ ಸಂಪತ್ತಲ್ಲ, ವಿಶ್ವವನ್ನೇ ಭಗವಂತ ನಮಗೆ ನೀಡಿರುವಾಗ ನಮ್ಮ ವೈಯಕ್ತಿಕ ಗಳಿಕೆಗಳು ಅದರ ಮುಂದೆ ಏನೂ ಅಲ್ಲ, ನಮ್ಮ ಬಳಿ ಸಂಪತ್ತಿದ್ದರೂ ಅದು ನಮ್ಮದಲ್ಲ ಇಡೀ ವಿಶ್ವದ್ದು ಎಂದು ಭಾವಿಸುವ ವಿಶ್ವ ಚಿಂತನೆಯಲ್ಲಿ  ಅಧ್ಯಾತ್ಮದ ಸಾರವಿದೆ, ಭೌತಿಕ ಸಂಪತ್ತು ನಮಗೆ ‘ಮದ’ ನೀಡಿದರೆ ಅಧ್ಯಾತ್ಮದ ಸಂಪತ್ತು ನಮಗೆ ‘ಮುದ’ ನೀಡುತ್ತದೆ, ಎಷ್ಟೇ ಗಳಿಸಿದರೂ ಕೊನೆಯಲ್ಲಿ ಅದನ್ನು ಬಿಟ್ಟು ಹೋಗಬೇಕೇ ಹೊರತು ಜೊತೆಯಲ್ಲಿ ಕೊಂಡೊಯ್ಯಲು ಆಗುವುದಿಲ್ಲ ಎಂಬ ಅರಿವು ಉಂಟಾಗುವುದು ಸತ್ಯಶೋಧನೆಯಲ್ಲಿ ಎಂದ ಹೆಚ್ ಬಿ ಮಂಜುನಾಥ್ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ನಡೆನುಡಿಗಳೆರಡರಲ್ಲೂ ಸಾಮ್ಯವಿತ್ತು, ಅವರು ಸಾತ್ವಿಕ ಸಂಪೂರ್ಣತೆಗೊಂದು ವಿಶ್ವ ಮಾದರಿಯಾಗಿದ್ದರು ಎಂದರು. ಅಂತರಿಂದ್ರಿಯವಾದ ಮನಸ್ಸು, ಬುದ್ಧಿ ಮತ್ತು ಚಿತ್ತ, ಬಹಿರಿಂದ್ರಿಯವಾದ  ಕಣ್ಣು,  ಕಿವಿ,ಮೂಗು, ನಾಲಿಗೆ ಮತ್ತು ಚರ್ಮಗಳ ಕಾಮನೆ, ಅಂತರ್ ಬಹಿರಿಂದ್ರಿಯವಾದ ವಾಕ್ಕು ಗಳ ನಿಗ್ರಹವೇ ಯಮ ನಿಯಮಗಳಾಗಿದ್ದು ಆಸನ, ಪ್ರಾಣಾಯಾಮ, ಪ್ರತ್ಯಾಹಾರ,  ಧಾರಣ, ಧ್ಯಾನ, ಸಮಾಧಿ ಅನುಸರಿಸುವ ಅಷ್ಟಾಂಗ ಯೋಗಕ್ಕೆ ಶ್ರವಣ,ಮನನ, ನಿ ದಿಧ್ಯಾಸನಗಳೆಂಬ ತ್ರಯಂಗ ಯೋಗವೇ ಮೂಲವಾಗಿದೆ ಎಂದು ಮಂಜುನಾಥ್ ಉದಾಹರಣೆಗಳ ಸಹಿತ ವಿವರಿಸಿದರು.  ಉದ್ಘೋಷಕರಾಗಿ ಎಸ್ ಎಂ ಚಂದ್ರಶೇಖರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶಾಬನೂರು ಎಸ್ ಕೆ ನಾಗರಾಜ ಹಾಡಿದರು. ಎಂ ಜಿ ಸುರೇಶ್ ಸ್ವಾಗತ ಕೋರಿದರು. ಮಲ್ಲಿಕಾರ್ಜುನ ಮಠದ್  ಎಸ್‌ ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳವರ ಕುರಿತು ಎಸ್ ಎಂ ಪ್ರಭುದೇವಯ್ಯ ಮಾತುಗಳನ್ನಾಡಿದರು. ಶಾಬನೂರು ಭೀಮಣ್ಣನವರ ನಿವಾಸದ ಮಹಡಿಯಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.