ಪ್ರಮೋದ್ ಗೆ ಟಿಕೆಟ್ ನೀಡಲು ಗಂಗಾ ಮತಸ್ಥರ ಆಗ್ರಹ

ಬೆಂಗಳೂರು, ಜ. ೨- ಮೀನುಗಾರರ ಸಮುದಾಯದ ಗಂಗಾಮತ, ಬೆಸ್ತ, ಮೊಗವೀರ, ಕೋಲಿ, ಕಬ್ಬಲಿಗ ,ಅಂಬಿಗ ಸಮುದಾಯಕ್ಕೆ ಸೇರಿದ ಹಿರಿಯ ಮುಖಂಡ ಪ್ರಮೋದ್ ಮಧ್ವರಾಜ್ ರವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕರ್ನಾಟಕ ಗಂಗ ಮತಸ್ಥರ ಸಂಘ ಬಿಜೆಪಿಯನ್ನು ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಬಿ. ಮೌಲಾಲಿ, ಪ್ರಧಾನ ಕಾರ್ಯದರ್ಶಿ ಸಿ. ಮುರಳೀಧರ್, ಮೀನುಗಾರ ಸಮುದಾಯ ೩೯ ಪರ್ಯಾಯ ಪದಗಳಿಂದ ರಾಜ್ಯದಲ್ಲಿ ಗುರುತಿಸಿಕೊಂಡಿದ್ದು, ೬೦ ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ಪ್ರಮೋದ್ ಮಧ್ವರಾಜ್ ಅವರು ಮೀನುಗಾರರ ಹಾಗೂ ಹಿಂದುಳಿದ ವರ್ಗದ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಮತ್ತು ವಿಕಾಸವನ್ನು ಧ್ಯೇಯವಾಗಿಟ್ಟುಕೊಂಡು ಯುವಜನರನ್ನು ಸಂಘಟಿಸುವ ಯುವ ಪೀಳಿಗೆಯಲ್ಲಿ ನಾಯಕತ್ವ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಾಮಾಣಿಕತೆ, ಪಾರದರ್ಶಕತೆ, ಬದ್ಧತೆ ಪರಿಶ್ರಮ ಸಮರ್ಪಣಾ ಮನೋಭಾವದಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೃಜನಶೀಲ ಮನಸ್ಸಿನ ಪ್ರಮೋದ್ ಮಧ್ವರಾಜ್ ಮೀನುಗಾರರ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ರಾಜಕೀಯ ಪ್ರಜ್ಞೆಗಳ ಉನ್ನತೀಕರಣ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮೀನುಗಾರರ ಸಮಸ್ಯೆಗಳು ಹಿಂದುಳಿದ ವರ್ಗದ ಸಮಸ್ಯೆಗಳನ್ನ ತಿಳಿದುಕೊಂಡು ಬಗೆಹರಿಸುತ್ತಿರುವ ಪ್ರಮೋದ್ ಮದ್ವರಾಜ್ ರಾಜಕಾರಣದಲ್ಲಿ ಸಮ ಚಿತ್ತ ಭಾವದ ರಾಜಕಾರಣಿ. ಅಭಿವೃದ್ಧಿ ಕುರಿತು ದೂರದರ್ಶಿತ್ವ ಹೊಂದಿರುವ ದಾರ್ಶನಿಕ ರಾಜಕಾರಣಿ, ಜಾಗತಿಕ ಜನನಾಯಕ ನರೇಂದ್ರ ಮೋದಿ ಯವರ ಅಭಿವೃದ್ಧಿಪರ ಚಿಂತನೆ, ಬಿಜೆಪಿಯ ರಾಜಕೀಯ ನಿಲುವು ಮತ್ತು ಘನ ನಾಯಕತ್ವವನ್ನು ಅನುಸರಿಸುತ್ತಿರುವ ಪ್ರಮೋದ್ ಮಧ್ವರಾಜ್ ಯುವ ಸಮೂಹದಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.