ಪ್ರಭು ಚೌಹಾಣರವರು ಪರಿಶುದ್ಧ ಮನಸ್ಸಿನ ರಾಜಕಾರಣಿ

ಭಾಲ್ಕಿ: ಜೂ.28:ಔರಾದ ಶಾಸಕ ಪ್ರಭು ಚೌಹಾಣರವರು ಪರಿಶುದ್ಧ ಮನಸ್ಸಿನ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರು ನಾಲ್ಕನೇ ಬಾರಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ ಎಂದು ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನಕ್ಕೆ ಶ್ರೀಗಳ ಆಶಿರ್ವಾದ ಪಡೆಯಲು ಆಗಮಿಸಿದ ಔರಾದ ಶಾಸಕ ಪ್ರಭು ಚೌಹಾಣ ರವರಿಗೆ ಸತ್ಕರಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಏಳು ಬೀಳು ಇದ್ದದ್ದೇ, ಗೆಲುವು ಸಾಧಿಸಿದ ನಂತರ ವೈಮನಸ್ಸು ಮನಸ್ಸಿನಲ್ಲಿಟ್ಟುಕೊಳ್ಳದೇ, ನಮ್ಮ ವಿರೋಧಿಗಳಿಗೂ ಪ್ರೀತಿಯಿಂದ ಮಾತನಾಡಿಸಿ ಮುನ್ನಡಯಬೇಕು ಎಂದು ಶಾಸಕ ಪ್ರಭು ಚೌಹಾಣ ರವರಿಗೆ ಸಲಹೆ ನೀಡಿದರು.

ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಔರಾದ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಭು ಚೌಹಾಣರವರ ಕೊಡುಗೆ ಅಪಾರವಾಗಿದೆ. ಹೀಗಾಗಿ ಅವರು ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇನ್ನು ಮುಂದೆಯೂ ಅವರು ಹೀಗೆ ಕಾರ್ಯನಿರ್ವಹಿಸಿ ಸೋಲಿಲ್ಲದ ಸರ್ದಾರರಾಗಬೇಕು ಎಂದು ಆಶಿರ್ವದಿಸಿದರು.

ಇದೇವೇಳೆ ನೂತನವಾಗಿ ಆಯ್ಕೆಯಾದ ಕಾರ್ಯನಿರತ ಪತ್ರಕರ್ತರಾದ ಜೈರಾಜ ದಾಬಶೆಟ್ಟಿ, ಗಣಪತಿ ಬೋಚರೆ, ಸಂತೋಷ ಬಿಜಿಪಾಟೀಲ, ಭದ್ರೇಶಸ್ವಾಮಿ, ಪರಶುರಾಮ ಕರ್ಣಂ, ಸಂತೋಷ ಹಡಪದ ರವರಿಗೆ ಶ್ರೀಮಠದ ಪೂಜ್ಯರ ಸಹಯೋಗದೊಂದಿಗೆ ಶಾಸಕ ಪ್ರಭು ಚೌಹಾಣ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಮಶೆಟ್ಟಿ ಪನ್ನಾಳೆ, ಕಿರಣಪಾಟೀಲ ಹಕ್ಯಾಳ, ವೀರಣ್ಣಾ ಕಾರಬಾರಿ, ಶಾಂತಯ್ಯಾ ಸ್ವಾಮಿ, ಬಾಬು ಲಾದಾ, ಭದ್ರೇಶ ಕಾರಾಮುಂಗೆ, ಆಕಾಶ ದುಬುಲಗುಂಡೆ ಉಪಸ್ಥಿತರಿದ್ದರು. ಬಾಬು ಬೆಲ್ದಾರ ನಿರೂಪಿಸಿ ವಂದಿಸಿದರು.