
ಬೀದರ:ಮೇ.25:ಔರಾದ (ಬಾ) ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಪ್ರಭು.ಬಿ ಚವ್ಹಾಣ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಗೋಮಾತೆ, ಧರ್ಮಗುರು ಸಂತ ಸೇವಾಲಾಲ್ ಮಹಾರಾಜರು ಹಾಗೂ ಔರಾದ ಕ್ಷೇತ್ರದ ಆರಾಧ್ಯದೈವ ಅಮರೇಶ್ವರರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸಭೆಯ ಹಂಗಾಮಿ ಸಭಾಪತಿ ಆರ್.ವಿ ದೇಶಪಾಂಡೆ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಜನತೆ ಸತತ ನಾಲ್ಕನೇ ಅವಧಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಔರಾದ(ಬಿ) ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಶ್ರಮ ವಹಿಸುತ್ತೇನೆ. ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ಸದಾ ಬದ್ದನಿದ್ದೇನೆ ಎಂದು ತಿಳಿಸಿದ್ದಾರೆ.