ಪ್ರಭು ಚವ್ಹಾಣ ಕ್ಷಮೆಯಾಚಿಸಲಿ

ಅಫಜಲಪುರ:ಏ.05:ಬೀದರ ಜಿಲ್ಲಾ ಉಸ್ತುವಾರಿಯನ್ನು ಹೊಂದಿರುವ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಬಸವಕಲ್ಯಾಣ ಉಪಚುನಾವಣಾ ಪ್ರಚಾರ ವೇಳೆಯಲ್ಲಿ ಹಡಪದವರು ಶಾಸಕರಾಗಿ ಆಯ್ಕೆಯಾದರೆ ದಾಡಿ,ಕಟಿಂಗ್ ಮಾಡುತ್ತಾ ತಿರುಗುತ್ತಾರೆಯೇ ಎಂದು ಹೇಳಿ ಹಡಪದ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಹೀಗಾಗಿ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಇಲ್ಲದಿದ್ದರೆ ಈ ಉಡಾಫೆ ಹೇಳಿಕೆಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹಡಪದ ಸಮಾಜದ ಮುಖಂಡ ಪಂಡಿತ ನಾವಿ ಮಾಶಾಳ ಎಚ್ಚರಿಕೆ ನೀಡಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಉಡಾಫೆ ಮಾತುಗಳನ್ನಾಡಿ ಹಡಪದ ಸಮಾಜದ ಕಾಯಕಕ್ಕೆ ಅವಮಾನ ಮಾಡಿದ್ದಾರೆ.12ನೇ ಶತಮಾನದಲ್ಲಿಯೇ ಬಸವಣ್ಣವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಹಡಪದ ಅಪ್ಪಣ್ಣನವರ ಸಮಾಜದ ಬಂಧುಗಳು ಕಾಯಕವೇ ಕೈಲಾಯವೆಂದು ನಂಬಿ ಬದುಕುವವರು,ಪ್ರಭು ಚವ್ಹಾಣ ಅವರು ಗೌರವಯುತ ಸ್ಥಾನದಲ್ಲಿದ್ದು ಒಂದು ವೃತ್ತಿಗೆ ಅವಮಾನ ಮಾಡುವುದು ಎಷ್ಟು ಸರಿ?.ತಮ್ಮ ಪದ ಬಳಕೆ ಬಗ್ಗೆ ಸಚಿವರು ಬಹಿರಂಗವಾಗಿ ಕ್ಷಮೆ ಕೋರಬೇಕು.ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರಿಂದ ರಾಜೀನಾಮೆ ಪಡೆಯಬೇಕು ಇಲ್ಲವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವವರೆಗೂ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.