ಪ್ರಬುದ್ಧ ಸಮಾಜ ನಿರ್ಮಿಸಲು ಗ್ರಾಮೀಣ ಗ್ರಂಥಾಲಯಗಳನ್ನು “ಅರಿವು ಕೇಂದ್ರ”ಗಳಾಗಿ ಮೇಲ್ದರ್ಜೆಗೆ:ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಆ.05:ರಾಜ್ಯ ಸರಕಾರ ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ, ಓದಿನ ಬಗೆಗೆ ಅಭಿರುಚಿ ಮುಂತಾದವುದಗಳನ್ನು ಬೆಳೆಸಲು ಉದ್ಧೇಶಿಸಿ, ಸ್ಥಾಪನೆ ಮಾಡಿದ ಮುಕ್ತ ಸಾರ್ವಜನಿಕ ವ್ಯವಸ್ಥೆಯಾದ ನಮ್ಮ ಗ್ರಾಮ ಪಂಚಾಯತಿ ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳಾಗಿ ಸಮಾಜದ ಜ್ಞಾನಾರ್ಜನೆಗೆ ಅರ್ಥಪೂರ್ಣ ಸಾಧನಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗುಣಗಾನ ಮಾಡಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ಪ್ರಬುದ್ಧ ಸಮಾಜ ನಿರ್ಮಿಸಲು ಗ್ರಾಮೀಣ ಭಾಗದ ಈ ಗ್ರಂಥಾಲಯಗಳನ್ನು “ಅರಿವು ಕೇಂದ್ರ”ಗಳಾಗಿ ಮೇಲ್ದರ್ಜೆಗೇರಿಸಲಾಗುವುದು.
ಬಸವಣ್ಣನವರ “ಅರಿವೇ ಗುರು” ತತ್ವ ನಮ್ಮ ಸಮಾಜದ ಪ್ರತಿಯೊಬ್ಬರಲ್ಲೂ ಮಾರ್ದನಿಸಬೇಕು. ಅರಿವಿನೆಡಿಗಿನ ಸಮಾಜದ ಪ್ರತಿಯೊಬ್ಬರ ಪ್ರಯಾಣದ ಸಾಥಿಯಾಗಿ ನಮ್ಮ ಇಲಾಖೆ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ‘ಅರಿವು ಕೇಂದ್ರಗಳು’ ಎಂದು ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ಒದಗಿಸಲು ವಿಶೇಷ ಕಾರ್ಯಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದೆ ಎಂದು ಸಚಿವರು ಹೇಳಿದರು.

” ಸಾರ್ವಜನಿಕರಿಗೆ ಸಹಾಯವಾಗುವಂತೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ವಾರಾಂತ್ಯದಲ್ಲಿಯೂ ತೆರೆಯಲು ಅನುವು ಮಾಡಿಕೊಡಲಾಗುವುದು. ಇದು ಬಾಬಾಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ನಮ್ಮ ಪ್ರಮುಖ ಹೆಜ್ಜೆಯಾಗಿದೆ” ಎಂದು ಖರ್ಗೆ ಹೇಳಿದರು.

ಈ ಕಾರ್ಯದಲ್ಲಿ ಜೊತೆಯಾಗಿ ಇಂದು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ (KRIDL) ತನ್ನ CSR ಅನುದಾನದಡಿಯಲ್ಲಿ ಕಲಬುರ್ಗಿ ಜಿಲ್ಲೆಯ ಎಲ್ಲಾ 261 ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ IAS, KAS ಸೇರಿದಂತೆ PC, PSI, FDA, SDA, PDO, ಗ್ರೂಪ್ ಸಿ, SSC, IBPS, RRB ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದಂತಹ ಒಟ್ಟು 41 ಕಲಿಕಾ ಪುಸ್ತಕಗಳನ್ನು ಒದಗಿಸಲು ಮುಂದೆ ಬಂದಿದ್ದು, ಇದಕ್ಕಾಗಿ ₹26 ಲಕ್ಷ ರೂಪಾಯಿ ಹಣವನ್ನು ಚೆಕ್ ರೂಪದಲ್ಲಿ ಕಲಬುರ್ಗಿ ಜಿಲ್ಲಾ ಪಂಚಾಯತಿಗೆ ನೀಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಹೇಳಿದರು.