ಪ್ರಬಲ ಖಾತೆಗೆ ಸಿಂಗ್ ಪಟ್ಟು ಸಿಎಂಗೆ ಇಕ್ಕಟ್ಟು

ಬೆಂಗಳೂರು, ಆ. ೧೧- ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು, ತಾವು ಬಯಸಿದ ಖಾತೆ ಸಿಗದೆ ಮುನಿಸಿಕೊಂಡಿರುವ ಸಚಿವ ಆನಂದ್‌ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರ ಈ ನಡೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಗೆ ಸಂಕಷ್ಟ ತಂದಿದ್ದು, ನೂತನ ಸರ್ಕಾರದ ಮೊದಲ ವಿಕೆಟ್ ಪತನವಾಗಲಿದೆಯೇ ಎಂಬ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ದಿನವೇ ನಮಗೆ ಪ್ರಬಲ ಖಾತೆ ಸಿಗದೆ ಇದ್ದದ್ದಕ್ಕೆ ಬೇಸರಗೊಂಡು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಖಾತೆ ಬದಲಾವಣೆಗೆ ಮನವಿ ಮಾಡಿ ತಮ್ಮ ಬೇಡಿಕೆ ಈಡೇರಿಕೆಗೆ ಮೂರು ದಿನಗಳ ಗಡುವು ನೀಡಿದ್ದರು.
ತಾವು ನೀಡಿದ ಗಡುವಿನಲ್ಲಿ ತಮಗೆ ಬೇರೆ ಖಾತೆ ನೀಡದಿರುವ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಆನಂದ್‌ಸಿಂಗ್ ಇವತ್ತು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವರು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಸಚಿವ ಆನಂದ್‌ಸಿಂಗ್ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರನ್ನು ಮೂರು ದಿನಗಳ ಹಿಂದೆ ಭೇಟಿ ಮಾಡಿದ ಸಂದರ್ಭದಲ್ಲೇ ರಾಜೀನಾಮೆ ಪತ್ರ ನೀಡಿದ್ದಾರೆ ಎಂದು ಹೇಳಲಾಗಿದೆಯಾದರೂ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಇದನ್ನು ಅಲ್ಲಗಳೆದಿದ್ದು ಆನಂದ್‌ಸಿಂಗ್ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ೧೫ ದಿನ ಪೂರೈಸುವಷ್ಟರಲ್ಲೇ ಬಸವರಾಜಬೊಮ್ಮಾಯಿ ಅವರಿಗೆ ಸಂಕಷ್ಟ ಎದುರಾಗಿದ್ದು, ಖಾತೆ, ಕ್ಯಾತೆಯನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಈಗಾಗಲೇ ಆನಂದ್‌ಸಿಂಗ್ ರವರ ಜತೆ ೨-೩ ಬಾರಿ ಮಾತನಾಡಿ ಅವರ ಮನವೊಲಿಸುವ ಕಾರ್ಯ ನಡೆಸಿದ್ದರಾದರೂ ಆನಂದ್‌ಸಿಂಗ್ ಯಾವುದಕ್ಕೂ ಬಗ್ಗಿಲ್ಲ. ಹಾಗಾಗಿ ಖಾತೆ ಹಂಚಿಕೆ ಅಸಮಾಧಾನ ಬಿಕ್ಕಟ್ಟು ಕಗ್ಗಂಟಾಗಿದೆ.
ಸಚಿವ ಆನಂದ್‌ಸಿಂಗ್ ತಮಗೆ ಪ್ರಬಲ ಲೋಕೋಪಯೋಗಿ ಇಲ್ಲವೆ ಇಂಧನ ಖಾತೆ ನೀಡಬೇಕು. ಈಗ ನೀಡಿರುವ ಪರಿಸರ ಪ್ರವಾಸೋದ್ಯಮ ಖಾತೆ ಬೇಡ. ಇಲ್ಲದಿದ್ದರೆ ತಾವು ರಾಜೀನಾಮೆ ನೀಡುವುದು ಶತಸಿದ್ಧ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಸಚಿವ ಆನಂದ್‌ಸಿಂಗ್ ಅವರ ಈ ಹಠಮಾರಿ ಧೋರಣೆ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮತ್ತೊಮ್ಮೆ ಆನಂದ್‌ಸಿಂಗ್ ಅವರ ಜತೆ ಚರ್ಚಿಸಿ ಎಲ್ಲವನ್ನು ಸರಿ ಮಾಡುವ ಪ್ರಯತ್ನವನ್ನು ಬಸವರಾಜಬೊಮ್ಮಾಯಿ ನಡೆಸಿದ್ದಾರೆ.
ಹೈಕಮಾಂಡ್ ಮಟ್ಟದಲ್ಲೂ ಆನಂದ್‌ಸಿಂಗ್ ಅವರನ್ನು ಮನವೊಲಿಸುವ ಕಾರ್ಯ ನಡೆದಿದ್ದು, ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ಆನಂದ್‌ಸಿಂಗ್ ಅವರಿಗೆ ಆಪ್ತರಾಗಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರವರ ಮೂಲಕ ಆನಂದ್‌ಸಿಂಗ್‌ರವರ ಮನವೊಲಿಸುವ ಪ್ರಯತ್ನಗಳು ನಡೆದಿವೆ.
ಸಚಿವರ ಖಾತೆ ಹಂಚಿಕೆ ನಂತರ ಅಧಿಕಾರ ವಹಿಸಿಕೊಳ್ಳದೆ ಬಳ್ಳಾರಿಗೆ ತೆರಳಿರುವ ಆನಂದ್‌ಸಿಂಗ್, ನಿನ್ನೆ ರಾತ್ರಿ ದಿಢೀರ್ ಎಂದು ಹೊಸಪೇಟೆಯಲ್ಲಿರುವ ಶಾಸಕರ ಕಾರ್ಯಾಲಯದ ಬೃಹತ್ ನಾಮಫಲಕವನ್ನು ಕ್ರೇನ್ ಮೂಲಕ ತೆರವುಗೊಳಿಸಿದ್ದರು. ಯಾವುದರ ಬಗ್ಗೆಯೂ ಮಾತನಾಡದೆ ಯಾರ ಕೈಗೂ ಸಿಕ್ಕಿರಲಿಲ್ಲ. ಈ ಎಲ್ಲ ಬೆಳವಣಿಗೆಗಳು ಆನಂದ್‌ಸಿಂಗ್ ಸಚಿವ ಹುದ್ದೆಗೆ ಮಾತ್ರವಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವರು ಎಂಬ ಸುದ್ದಿಗಳಿಗೆ ಗ್ರಾಸವಾಗಿದೆ.
ವಿಶೇಷ ಪೂಜೆ
ಹೊಸಪೇಟೆಯಲ್ಲಿರುವ ಆನಂದ್‌ಸಿಂಗ್ ಅವರು ಇಂದು ಅಲ್ಲಿನ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ಹೋಮ, ಹವನ, ವಿಶೇಷ ಪೂಜಾದಿಗಳಲ್ಲಿ ತೊಡಗಿಕೊಂಡಿದ್ದಾರೆ.
ಆನಂದ್‌ಸಿಂಗ್ ರವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿದ್ದೇ ಆನಂದ್‌ಸಿಂಗ್. ಹಾಗಾಗಿ ಆ ಸರ್ಕಾರ ಪತನವಾಗಿತ್ತು. ಈಗಲೂ ಆನಂದ್‌ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ದಾರಿ ತುಳಿಯುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಸಚಿವ ಹುದ್ದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಆನಂದ್‌ಸಿಂಗ್ ನಿರಾಕರಿಸಿದ್ದಾರೆ.
ಹೊಸಪೇಟೆಯೆ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆದಿರುವ ವಿಶೇಷ ಹೋಮ, ಪೂಜೆಗಳಲ್ಲಿ ಪಾಲ್ಗೊಂಡ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಏನೂ ಕೇಳಬೇಡಿ. ದಯವಿಟ್ಟು ಮಾಧ್ಯಮ ಮಿತ್ರರು ಸಹಕರಿಸಿ ಎಂದು ಕೈ ಮುಗಿದರು.
ನಾನು ಏನು ಹೇಳಬೇಕೋ ಅದನ್ನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು, ನಾನು ಮಾತ್ರ ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಖಾತೆ ಹಂಚಿಕೆಯಿಂದ ಮುನಿಸಿಕೊಂಡಿರುವ ಸಚಿವ ಆನಂದ್‌ಸಿಂಗ್ ಸಚಿವ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸುವರು ಎಂದು ಹೇಳಲಾಗುತ್ತಿದೆ.
ಸಚಿವ ಆನಂದ್‌ಸಿಂಗ್ ಅವರ ಆಪ್ತರ ಪ್ರಕಾರ ಆನಂದ್‌ಸಿಂಗ್ ಅವರು ಇಂದು ಬೆಂಗಳೂರಿಗೆ ಬಂದು ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಘೋಷಿಸುವರು ಎನ್ನಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಉಪಚುನಾವಣೆಯಲ್ಲೂ ಅವರು ಸ್ಪರ್ಧಿಸುವುದಿಲ್ಲ. ಇಂದು ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮುಗಿದ ನಂತರ ಅವರು ಬೆಂಗಳೂರಿಗೆ ಬರುವರು ಎಂದು ಅವರ ಆಪ್ತರು ಹೇಳಿದ್ದಾರೆ.