ಪ್ರಬಂಧ ಸ್ಪರ್ಧೆ ಕಲಿಕೆಗೆ ಪೂರಕ: ಸಚ್ಚಿದಾನಂದಮೂರ್ತಿ

ಕೋಲಾರ,ಮಾ.೧೬: ಉತ್ತಮ ಆರೋಗ್ಯದಿಂದ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಮನಗಂಡು ಸ್ವಚ್ಚತೆ ಕಾಪಾಡಿಕೊಳ್ಳಿ, ಪೌಷ್ಟಿಕ ಆಹಾರ ಸೇವನೆ ಮಾಡಿ ಎಂದು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಸಚ್ಚಿದಾನಂದಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಧಾನ್‌ಫೌಂಡೇಷನ್, ಟೆಕ್ಸಾಸ್ ಕಂಪನಿ ಸಹಯೋಗದಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ರೆಡ್‌ಕ್ರಾಸ್ ಘಟಕದಡಿ ನಡೆದ ಕಾರ್ಯಕ್ರಮದಲ್ಲಿ, ಉತ್ತಮ ಆರೋಗ್ಯ ಮತ್ತು ಕಲಿಕೆಗೆ ಪೌಷ್ಟಿಕ ಆಹಾರ ವಿಷಯದ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಉತ್ತಮ ಆರೋಗ್ಯ ಕಲಿಕೆಯ ಹಾದಿಗೆ ಪೂರಕವಾಗಿರುತ್ತದೆ, ಕೋವಿಡ್ ಮಹಾಮಾರಿಯಿಂದ ತತ್ತರಿಸಿರುವ ನಮಗೆ ಇಂದು ಸ್ವಚ್ಚತೆ ಹಾಗೂ ಆರೋಗ್ಯ ರಕ್ಷಣೆಯ ಅರಿವು ಹೆಚ್ಚು ಮೂಡಿದೆ ಎಂದರು. ಕೋವಿಡ್‌ನಿಂದಾಗಿ ಶಾಲೆಗಳು ಇಲ್ಲದೇ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ ದಿನಗಳು ಮರೆಯುವಂತಿಲ್ಲ, ಜೊತೆಗೆ ಇನ್ನೂ ಕೋವಿಡ್ ಹೋಯಿತೆಂದು ಮೈಮರೆಯುವಂತೆಯೂ ಇಲ್ಲ ಎಂದ ಅವರು, ಮಾಸ್ಕ್,ಸಾಮಾಜಿಕ ಅಂತರ ಕಡ್ಡಾಯ ಪಾಲನೆಯಿಂದ ಮಾತ್ರ ನಾವು ರಕ್ಷಣೆ ಪಡೆಯಬಹುದಾಗಿದೆ ಎಂಬುದನ್ನು ಮರೆಯಬಾರದು ಎಂದರು.
ಗ್ರಾ.ಪಂ ಲೆಕ್ಕ ಸಹಾಯಕ ನಾಗರಾಜ್ ಶಾಲೆಯ ಆವರಣ ಸ್ವಚ್ಚತೆಗೆ ಗಮನ ನೀಡಿ, ಎಲ್ಲೆಂದರಲ್ಲಿ ಕಸ ಹಾಕಿ ಪರಿಸರಕ್ಕೆ ಮಾರಕವಾಗುವಂತೆ ಮಾಡದಿರಿ, ಎಲ್ಲಿ ಸ್ವಚ್ಚತೆ ಇರುತ್ತದೆಯೋ ಅಲ್ಲಿ ಉತ್ತಮ ಆರೋಗ್ಯ ಇರುತ್ತದೆ ಎಂಬುದನ್ನು ಮರೆಯದಿರಿ ಎಂದರು.
ಧಾನ್‌ಫೌಂಡೇಷನ್ ಅಸೊಸೀಯೇಟ್ ರಾಮಚಂದ್ರಪ್ಪ, ಧಾನ್ ಫೌಂಡೇಷನ್ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಈ ಬಾರಿ ಕೋವಿಡ್‌ನಿಂದಾಗಿ ಕೆಲವು ಕಾರ್ಯಕ್ರಮಗಳಿಗೆ ಹಿನ್ನಡೆಯಾಯಿತು ಎಂದು ತಿಳಿಸಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರನ್ನು ಅಭಿನಂದಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ಶಾಲೆಯ ಹೇಮಂತ್ ಪ್ರಥಮ, ಚಾರುಲತಾ ದ್ವಿತೀಯ ಹಾಗೂ ಆರ್.ಮೋನಿಕಾ ತೃತೀಯ ಸ್ಥಾನ ಪಡೆದು ಬಹುಮಾನ ಗಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ರೆಡ್ ಕ್ರಾಸ್ ಮುಖ್ಯಸ್ಥೆ ಫರೀದಾ, ಶಾಲೆಯ ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಸುಗುಣಾ, ಶ್ರೀನಿವಾಸಲು,ಡಿ.ಚಂದ್ರಶೇಖರ್, ಆಶಾ ಕಾರ್ಯಕರ್ತೆ ಅರುಣಾ ಮತ್ತಿತರರಿದ್ದರು