ಪ್ರಪಾತಕ್ಕೆ ಲಾರಿ ಪಲ್ಟಿ: ಚಾಲಕ ಮೃತ್ಯು ಮುಂಜಾನೆ ಶಿರಾಡಿ ಬಳಿ ನಡೆದ ಅಪಘಾತ

ಉಪ್ಪಿನಂಗಡಿ, ಎ.೨೨- ಕಂಟೈನರ್ ಲಾರಿಯೊಂದು ಪ್ರಪಾತಕ್ಕೆ ಉರುಳಿ ಮರದಲ್ಲಿ ಸಿಲುಕಿಕೊಂಡ ಘಟನೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಗುರುವಾರ ನಸುಕಿನ ಜಾವ ನಡೆದಿದ್ದು, ಘಟನೆಯಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಾರ್ಖಂಡ್ ಮೂಲದ ನಸ್ರುಲ್ಲಾ ಖಾನ್ (೩೦) ಮೃತರು ಎಂದು ಗುರುತಿಸಲಾಗಿದೆ. ಕಾರುಗಳನ್ನು ಹೇರಿಕೊಂಡು ಹೋಗುವ ಕಂಟೈನರ್ ಲಾರಿ ಇದಾಗಿದ್ದು, ಇಂದು ನಸುಕಿನ ಜಾವ ಸುಮಾರು ಎರಡು ಗಂಟೆಗೆ ಕೊಡ್ಯಕಲ್ಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿ ಮರವೊಂದರಲ್ಲಿ ಸಿಲುಕಿ ಕೊಂಡಿತ್ತು. ಮರದ ನಡುವೆ ಲಾರಿಯ ಕ್ಯಾಬಿನ್ ಜಾಮ್ ಆಗಿದ್ದು, ಇದರ ನಡುವೆ ನಸ್ರುಲ್ಲಾ ಖಾನ್ ಸಿಲುಕಿಕೊಂಡಿದ್ದರು. ಸುದ್ದಿ ತಿಳಿದು ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಕ್ರೇನ್ ಸಹಾಯದಿಂದ ಲಾರಿ ಚಾಲಕನನ್ನು ಹೊರಗೆ ತೆಗೆದಿದ್ದು, ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.