ಪ್ರಪಂಚದಲ್ಲಿ ಭಾರತ ವಿವಿಧತೆಯಲ್ಲಿ ಏಕತೆ

ಸಿಂಧನೂರು.ನ.೧೯- ಹಲವಾರು ಭಾಷೆ, ಪ್ರಾಂತ, ಧರ್ಮ, ಜಾತಿ ಸೇರಿದಂತೆ ವಿವಿಧತೆಯಲ್ಲಿ ಭಾರತ ದೇಶ ಐಕ್ಯತೆ ಹೊಂದಿದ್ದು, ಪ್ರಪಂಚದಲ್ಲಿ ಭಾರತ ದೇಶ ಇತರ ದೇಶಗಳಿಗೆ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ವಿ.ಸನತ ಹೇಳಿದರು.
ಅವರು ಸ್ಥಳೀಯ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ನ್ಯಾಯವಾದಿಗಳ ಸಂಘ, ಶಂಕರ್ ಟ್ರಸ್ಟ್ ಕಾಲೇಜಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆನ್‌ಲೈನ್ ಮೂಲಕ ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸುವ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾತಿ, ಭಾಷೆ, ಮತ , ಧರ್ಮ ಪ್ರಾಂತ ಬಗ್ಗೆ ಭಿನ್ನಮತ ಸೃಷ್ಟಿ ಮಾಡಿಕೊಂಡು ಐಕ್ಯತೆ ಇಲ್ಲದೆ ಹಲವಾರು ದೇಶಗಳು ಒಡೆದು ವಿಭಜನೆಗೊಂಡಿವೆ. ರಾಷ್ಟ್ರದ ಸ್ವಾತಂತ್ರ, ಐಕ್ಯತೆ ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ದೇಶ ವಿಭಜನೆಗೆ ಅವಕಾಶ ಕೊಡದೆ ಐಕ್ಯತೆಯಿಂದ ಸಾರ್ವಭೌಮತೆಯಿಂದ ಎಲ್ಲರೂ ಒಂದಾಗಿ ಜೀವನ ನಡೆಸಿಕೊಂಡು ದೇಶ ಇತರ ದೇಶಗಳಿಗೆ ಮಾದರಿಯಾಗಿದೆ ಎಂದರು.
ಮತ, ಭಾಷೆ , ಪ್ರಾಂತ ಸೇರಿದಂತೆ ವಿವಿಧೆತೆಯಲ್ಲಿ ಏಕತೆಯನ್ನು ಭಾರತ ದೇಶ ಹೊಂದಿದೆ. ವಿಚಿತ್ರಕಾರಿ ಹಾಗೂ ಕೋಮುವಾದಿ ಶಕ್ತಿಗಳ ಹರಡುವ ಪ್ರಚೋದಾತ್ಮಕ ಹೇಳಿಕೆಗಳಿಗೆ ಕಿವಿಗೊಡದೆ ಸಂವಿಧಾನದ ಆಶಯಗಳನ್ನು ಹಾಗೂ ಹಕ್ಕುಗಳನ್ನು ಎಲ್ಲರೂ ಸಮನಾಗಿ ಪಡೆದು ಸುಖ ಹಾಗೂ ಶಾಂತಿ ನೆಮ್ಮದಿಯಿಂದ ಜೀವನನಡೆಸಿದಾಗ ಮಾತ್ರ ದೇಶ ಐಕ್ಯತೆಯಿಂದ ಇರಲು ಸಾಧ್ಯ ಇಲ್ಲದಿದ್ದರೆ ಇತರ ದೇಶಗಳಂತೆ ವಿಭಜನೆ ಆಗುವುದು ಸಂಭವ ಉಂಟು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎನ್.ರಾಮನಗೌಡ ವಕೀಲರು ಹೇಳಿದರು.
ಎಸ್.ಎಚ್.ಪಿ. ಖಾದ್ರಿ ವಕೀಲರು ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಕೆ. ವೀರಭದ್ರಗೌಡ ಸಾಲ್ಗುಂದ ವಕೀಲರು ಕಾರ್ಯಕ್ರಮ ನಿರೂಪಿಸಿದರು. ಆನ್‌ಲೈನ್ ಕಾರ್ಯಕ್ರಮದ ನಂತರ ನ್ಯಾಯವಾದಿಗಳಿಗೆ, ಸಿಬ್ಬಂದಿಗಳಿಗೆ ಸಿವಿಲ್ ನ್ಯಾಯಾಧೀಶರಾದ ಸಿ.ವಿ.ಸನತ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.