ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೇಟಿ

ವಿಜಯಪುರ, ನ.26-ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಡಾ. ಆರ್. ಬಿ. ಬೆಳ್ಳಿ ಇವರ ಮಾದರಿ ಕೃಷಿ ಅರಣ್ಯ ಕ್ಷೇತ್ರಕ್ಕೆ ಇಂದು ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ. ರಾಧಾ ದೇವಿ ಇವರು ಬೇಟಿ ನೀಡಿ ತಮ್ಮ ಸಂತಸ ವ್ಯಕ್ತ ಪಡಿಸಿದರು.
ಬೆಳಿಗ್ಗೆ ಆಗಮಿಸಿದ ಅವರು ಕ್ಷೇತ್ರದಲ್ಲಿನ ಹೆಬ್ಬೇವು, ಮಹಾಗನಿ, ಸಾಗವಾನಿ ಹಾಗೂ ಮಧ್ಯದಲ್ಲಿ ಬೆಳೆದ ಪೇರು, ಚಿಕ್ಕು, ಮಾವು, ಮೊಸಂಬಿ, ನಿಂಬೆ, ಸೀತಾಫಲ, ರಾಮಫಲ, ಅಂಜೂರ, ಆ್ಯಪಲ್‍ಬರ್, ನುಗ್ಗೆ ಆಧಾರಿತ ಕೃಷಿ, ತೋಟಗಾರಿಕೆ, ಅರಣ್ಯ ಕೃಷಿಯನ್ನೊಳಗೊಂಡ ಮಾದರಿ ತೋಟವನ್ನು ವೀಕ್ಷಿಸಿ ಅತ್ಯಂತ ಸಂತಸ ವ್ಯಕ್ತಪಡಿಸಿದರು.
ಅವರು ಮಾತನಾಡಿ ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಕೃಷ್ಣಾ ಜಲಭಾಗ್ಯ ನಿಗಮದ ಅರಣ್ಯ ಸಸ್ಯಪಾಲನಾ ಕ್ಷೇತ್ರದಲ್ಲಿ ಬೆಳೆದ ವಿವಿಧ ಅರಣ್ಯ ಹಾಗೂ ತೋಟಗಾರಿಕಾ ಮತ್ತು ಅಲಂಕಾರಿಕ ಸಸ್ಯಗಳನ್ನು ವಿತರಿಸಿದ್ದು ಅದನ್ನು ರೈತರು ತಮ್ಮ ಕ್ಷೇತ್ರದಲ್ಲಿ ಬೆಳೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಬೇಟಿನೀಡಿದ್ದು ಎಲ್ಲಾ ಸಸ್ಯಗಳು ಚೆನ್ನಾಗಿ ಬೆಳೆದು ಇಳುವರಿ ಕೊಡುವದನ್ನು ನೋಡಿದರೆ ಬರದ ನಾಡು ಭಾಗ್ಯದ ಮಲೆನಾಡಾಗಿದೆ. ಇದೇರೀತಿ ಜಿಲ್ಲೆಯ ರೈತರು ಪ್ರತಿವರ್ಷ ತೆಗೆದುಕೊಂಡ ಸಸಿಗಳನ್ನು ಕಾಪಾಡಿಕೊಂಡು ಹೋಗಬೇಕೆಂದರು. ಇದೆ ಸಂದರ್ಭದಲ್ಲಿ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಂಬರುವ ವರ್ಷ ಇನ್ನೂ ಹೆಚ್ಚಿನ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಬೆಳೆಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಕೋರಿಕೊಂಡಾಗ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಆಲಮಟ್ಟಿ ವಲಯ ಅರಣ್ಯ ಅಧಿಕಾರಿ ಮಹೇಶ ಪಾಟೀಲ, ಸತೀಶ ಗಲಗಲಿ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.