ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ
ಗರ್ಭಿಣಿಯರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸುರಕ್ಷಿತವಾಗಿರಲು ಸೂಚನೆ


ಬಳ್ಳಾರಿ,ಜ.11- ಗರ್ಭೀಣಿಯರ ತಪಾಸಣಾ ದಿನವನ್ನಾಗಿ ಪ್ರತಿ ತಿಂಗಳು 9 ನೇ ತಾರೀಖಿನಂದು ಆದ್ಯತೆ ನೀಡುವ ಮೂಲಕ ಸುರಕ್ಷಿತ ಹೆರಿಗೆಯನ್ನು ಮಾಡಿಸಲು ತಾಯಂದಿರುಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ ಅವರು ತಿಳಿಸಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಮ್ಮ ಕುಟುಂಬದ ಗರ್ಭಿಣಿ ಸೊಸೆ, ಗರ್ಭಿಣಿ ಮಗಳನ್ನು ತಪ್ಪದೇ ಪಾಲಕರು ಕರೆದುಕೊಂಡು ಬಂದು ತಪಾಸಣೆ ಮಾಡಿಸುವ ಮೂಲಕ ಹೆರಿಗೆ ಸುರಕ್ಷಿತವಾಗುವುದಕ್ಕೆ ಕೈಜೊಡಿಸಬೇಕು ಎಂದು ತಿಳಿಸಿದರು.
ಚೊಚ್ಚಲು ಗರ್ಭವತಿಯಾದವರು, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾಗಿದ್ದಲ್ಲಿ, ಗರ್ಭಿಣಿಯ ಎತ್ತರ ಕಡಿಮೆ ಇದ್ದಲ್ಲಿ  ಅಥವಾ ರಕ್ತದೊತ್ತಡ  ಮುಂತಾದ ಸಮಸ್ಯೆಗಳು ಕಂಡು ಬಂದವರು ತಪ್ಪದೇ ಆರೋಗ್ಯ ಸಿಬ್ಬಂದಿಯವರನ್ನು, ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸುವ ಮೂಲಕ ತಮ್ಮ ಸುರಕ್ಷಿತ ಆರೋಗ್ಯ ಕಾಪಾಡಲು ಕೈ ಜೊಡಿಸುವಂತೆ ವಿನಂತಿಸಿದರು.
  ಈ ಶಿಬಿರದಲ್ಲಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಹೆಚ್‍ಐವಿ ಪರೀಕ್ಷೆ ಕೈಗೊಳ್ಳಲಾಗುವುದು. ರಕ್ತ ಕಡಿಮೆ ಇರುವವರಿಗೆ ಐರನ್ ಸುಕ್ರೋಸ್ ಚುಚ್ಚುಮದ್ದು ನೀಡುವುದು, ಇತರ ಯಾವುದೇ ಸೋಂಕುಗಳು ತಾಯಿಗೆ ಬಾರದಿರುವಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಗರ್ಭಿಣಿ ಅವಧಿಯಲ್ಲಿ ಸೇವಿಸಬೇಕಾದ ಹಣ್ಣು, ತರಕಾರಿ, ದವಸ, ಧಾನ್ಯಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ, ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ, ಡಾ.ಪ್ರಿಯಾಂಕ, ವೈದ್ಯಾಧಿಕಾರಿಗಳಾದ ಡಾ.ನಾರಾಯಣ ಬಾಬು ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.