ಪ್ರಧಾನ ಮಂತ್ರಿ ಗತಿ ಶಕ್ತಿ ಉಪಕ್ರಮದ ಅಡಿ ಸಿಯುಕೆನಲ್ಲಿ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರಾರಂಭ

ಕಲಬುರಗಿ:ಸೆ.3:”ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ರಾಷ್ಟ್ರ ನಿರ್ಮಾಣದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಉದಯೋನ್ಮುಖ ವಲಯಗಳಲ್ಲಿ ಒಂದಾಗಿದೆ” ಎಂದು ಸಿಯುಕೆ ಗೌರವಾನ್ವಿತ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ನಿನ್ನೆ ಅವರು ಸಿಯುಕೆಯಲ್ಲಿ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಕುರಿತು ಬಹು-ಶಿಸ್ತಿನ ಕೋರ್ಸ್‌ಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ “ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಆರ್ಥಿಕತೆಯ ಜೀವನ ರೇಖೆಯಾಗಿದೆ. ತಂತ್ರಜ್ಞಾನ ಮತ್ತು ಸಾರಿಗೆ ಮೂಲಸೌಕರ್ಯಗಳ ಬೆಳವಣಿಗೆಯೊಂದಿಗೆ ಈ ವಲಯವು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಇದಕ್ಕೆ ಹೊಸ ಯುಗದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ಅಗತ್ಯವಿದೆ. ಆದ್ದರಿಂದ ನಾವು ನಮ್ಮ ವಿದ್ಯಾರ್ಥಿಗಳಿಗೆ ಉದ್ಯಮದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತರಬೇತಿ ನೀಡಬೇಕು. ಸಾರಿಗೆ ಸಚಿವಾಲಯ, ಭಾರತ ಸರ್ಕಾರವು ಪ್ರಧಾನ ಮಂತ್ರಿ ಗತಿ ಶಕ್ತಿ ಎಂಬ ಉಪಕ್ರಮವನ್ನು ಏರ್ ಕಾರ್ಗೋ ನಿರ್ವಹಣೆ, ಸಾರಿಗೆ ಮತ್ತು ಶಿಪ್ಪಿಂಗ್ ಲಾಜಿಸ್ಟಿಕ್ಸ್ ನಿರ್ವಹಣೆ, ಚಿಲ್ಲರೆ ಮತ್ತು ಪೂರೈಕೆ ಸರಪಳಿ ನಿರ್ವಹಣೆ, ಕೃಷಿ-ಆಹಾರ ಪೂರೈಕೆ ಸರಪಳಿ ನಿರ್ವಹಣೆ, ಇ-ಕಾಮರ್ಸ್ ಮತ್ತು ಪೂರೈಕೆಯ, ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಡಿಜಿಟಲ್ ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅದೇಶಿಸಿದೆ. ಹಾಗಾಗಿ ಸಿಯುಕೆ ಈ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್‌ಗಳನ್ನು ನೀಡುತ್ತಿದೆ. ಐಐಟಿ ಮತ್ತು ಐಐಎಂಗಳಿಗೆ ಸಮಾನವಾಗಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಈ ಕೋರ್ಸ್‌ಗಳನ್ನು ಬಳಸಿಕೊಳ್ಳುವಂತೆ ಎಲ್ಲಾ ಅಧ್ಯಾಪಕರಿಗೆ ಸೂಚಿಸಿದರು

ಪಿ.ಎಂ.ಗತಿ ಶಕ್ತಿ ಕಾರ್ಯಕ್ರಮ, ಸಿಯುಕೆಯ ನೋಡಲ್ ಅಧಿಕಾರಿ, ಡಾ.ಗುರುರಾಜ ಮುಕರಂಬಿ ಅವರು ಎಲ್ಲಾ ಅಧ್ಯಾಪಕರು ಮತ್ತು ಅಧಿಕಾರಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ “ಈ ಕೋರ್ಸ್‌ಗಳನ್ನು ಯುಜಿ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ವರ್ಷ ವಿದ್ಯಾರ್ಥಿಗಳು ಎರಡು ಪತ್ರಿಕೆಗಳನ್ನು ಅಧ್ಯಯನ ಮಾಡುತ್ತಾರೆ; ಮೂರು ವರ್ಷದ ಕೋರ್ಸ್‌ನಲ್ಲಿ ಆರು ಪತ್ರಿಕೆಗಳನ್ನು ಅಧ್ಯಯನ ಮಾಡುತ್ತಾರೆ. ಈ ಕೋರ್ಸ್‌ಗಳು ಅವರನ್ನು ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯಲ್ಲಿ ಉದ್ಯೋಗಗಳನ್ನು ಪಡೆಯುವಂತೆ ಮಾಡುತ್ತದೆ ಮತ್ತು ಅವರು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಿ ಉದ್ಯಮಿಯಾಗಲು ಸಹಾಯ ಮಾಡಲಿವೆ” ಎಂದು ಹೇಳಿದರು.

ಕುಲಸಚಿವ ಪ್ರೊ.ಆರ್.ಆರ್.ಬಿರೇದಾರ್ ಅವರು ಮಾತನಾಡಿ, “ಈ ಕೋರ್ಸ್‌ಗಳು ಬಹುಶಿಸ್ತಿನಿಂದ ಕೂಡಿದ್ದು, ಹಲವು ವಿಭಾಗಗಳು ಒಟ್ಟಾಗಿ ಕೆಲಸ ಮಾಡುವುದರಿಂದ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಇದು ಯುಜಿ ಮಟ್ಟದಲ್ಲಿ ಯಶಸ್ವಿಯಾದರೆ ನಾವು ಪಿಜಿ ಮತ್ತು ಯುಜಿ ಮಟ್ಟದಲ್ಲಿ ಪೂರ್ಣ ಸಮಯದ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು” ಎಂದು ಹೇಳಿದರು.

ಎಲ್ಲಾ ಡೀನ್‌ರು, ಮುಖ್ಯಸ್ಥರು, ಅಧ್ಯಾಪಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು