ಪ್ರಧಾನಿ 5 ಶತಕೋಟಿ ಡಾಲರ್ ಗುರಿಗೆ ರಾಜ್ಯದಿಂದ 1 ಶತಕೋಟಿ ಡಾಲರ್ ಪಾಲು: ಸಿಎಂ

ಬೆಂಗಳೂರು/ ಉಡುಪಿ, ನ. 7 – ಪ್ರಧಾನಿ ಮೋದಿ ಅವರ ಉದ್ದೇಶಿತ 5 ಶತಕೋಟಿ ಡಾಲರ್ ಆರ್ಥಿಕತೆಯ ಕನಸು ಹೊಂದಿದ್ದು, ಅದರಲ್ಲಿ ಕರ್ನಾಟಕ ರಾಜ್ಯ 1 ಲಕ್ಷ ಶತಕೋಟಿ ಡಾಲರ್ ಆರ್ಥಿಕತೆಯ ಪಾಲು ನೀಡುವ ಗುರಿ ಇದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದ ಗುರಿಗಳಿಗೆ ಪೂರಕವಾಗಿ ರಾಜ್ಯ ಸರ್ಕಾರವೂ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಪಕ್ಷದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಹೇಳಿದರು.

2 ಲಕ್ಷ ಕೋಟಿ ಬಂಡವಾಳ :

ಕರಾವಳಿ ಜಿಲ್ಲೆಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 2 ಲಕ್ಚ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಪ್ರಧಾನ ಮಂತ್ರಿಯವರು ನಾಡಿದ್ದು ಬೆಂಗಳೂರಿಗೆ ಆಗಮಿಸಿ ವಂದೇ ಭಾರತ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದರು.

ಕೊಂಕಣ ರೈಲಿನ ವಿದ್ಯುದೀಕರಣ ಯೋಜನೆ ರಾಜ್ಯವನ್ನು ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸಲಿದೆ. ಮಂಗಳೂರು, ಕಾರವಾರ ಬಂದರುಗಳನ್ನು ಪ್ರಮುಖ ನಗರಗಳಿಗೆ ಜೋಡಿಸುವ ಗತಿ ಶಕ್ತಿ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದರು.

ಮೀನುಗಾರರ ದೋಣಿ ಮೇಲ್ದರ್ಜೆಗೆ:

ಮುಂದಿನ ದಿನಗಳಲ್ಲಿ ಮೀನುಗಾರರು ಬಳಸುವ ಸೀಮೆಎಣ್ಣೆ ಮೋಟರುಗಳ ದೋಣಿಗಳನ್ನು ಪೆಟ್ರೋಲ್ ಮೋಟರ್ ದೋಣಿಗಳಿಗೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಸಹಾಯ ಧನ ನೀಡಲಿದೆ ಎಂದರು.

ಮೀನುಗಾರರ ಬೇಡಿಕೆಯಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮೀನುಗಾರರಿಗೆ ಸೀಮೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ

ಕರಾವಳಿ ಭಾಗದಲ್ಲಿ ಬೆಳೆದ ಕುಚಲಕ್ಕಿಯನ್ನು ಖರೀದಿಸಿ ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮೀನುಗಾರಿಕೆ ಚಟುವಟಿಕೆಗಳಿಗೆ 8 ಮೀನುಗಾರ ಬಂದರುಗಳನ್ನು ಅಭಿವೃದ್ಧಿಪಡಿಸಲು ಆಯವ್ಯಯದಲ್ಲಿ ಅನುದಾನ ಕಲ್ಪಿಸಲಾಗಿದ್ದು, ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.

ಈ ವರ್ಷ 100 ಹೈ ಸ್ಪೀಡ್ ದೋಣಿಗಳನ್ನು ನೀಡಲು ಕ್ರಮವಹಿಸಲಾಗಿದ್ದು, ಅದರಲ್ಲಿ ಶೇ 40 ರಷ್ಟು ಸಬ್ಸಿಡಿ ವ್ಯವಸ್ಥೆಯಿದೆ. ಈ ಯೋಜನೆಗೆ ಜನರ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದಿನ ವರ್ಷದಿಂದ ಹೈಸ್ಪೀಡ್ ದೋಣಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.ಮಂಗಳೂರು ಹಾಗೂ ಕಾರವಾರ ಬಂದರು ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಬಂದರು ಅಭಿವೃದ್ಧಿ ಗೆ 1774 ಕೋಟಿ ರೂ.

ವಿಶ್ವಗುರು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕೊವಿಡ್ ನಂತರ ಇಡಿ ವಿಶ್ವವೇ ಆರ್ಥಿಕ ಸಂಕಷ್ಟದಲ್ಲಿದೆ ಭಾರತ ಮಾತ್ರ ಶೇ 7 ರಷ್ಟು ಪ್ರಗತಿ ಸಾಧಿಸುತ್ತಿದೆ. ಆರ್ಥಿಕ ಚೇತರಿಕೆಯನ್ನು ಸಮರ್ಥವಾಗಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಸಾಗರ ಮಾಲಾ ಯೊಜನೆ ಅಡಿಯಲ್ಲಿ ಕರಾವಳಿ ಬಂದರು ಅಭಿವೃದ್ಧಿ ಗೆ 1774 ಕೋಟಿ ರೂ. ನೀಡಿದೆ ಎಂದರು

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಅಭಿವೃದ್ದಿಗೆ ಸಿಆರ್ ಝಡ್ ನಿಯಮಗಳಿಗೆ ವಿನಾಯಿತಿಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಇಡೀ ದೇಶದಲ್ಲಿ ರಾಜ್ಯದ ಕಡಲು ತೀರದ ಅಭಿವೃದ್ದಿ, ಉದ್ಯೋಗ,ಆರ್ಥಿಕತೆ ಮತ್ತು ಹೆಚ್ಚಿನ ಮಟ್ಟದ ವ್ಯಾಪಾರ ವಹಿವಾಟು ಕರ್ನಾಟಕದ ಕರಾವಳಿ ಭಾಗದಲ್ಲಿ ಆಗಲಿದೆ ಎಂದು ಹೇಳಿದರು.