ಪ್ರಧಾನಿ ಹುದ್ದೆ ಕೈ ನಿರಾಸಕ್ತಿ

(ಸಂಜೆವಾಣಿ ಪ್ರತಿನಿಧಿಯಿಂದ)
ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆದ ವಿಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ಪಶ್ಚಿಮ ಬಂಗಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇಂದ್ರ ಮಾಜಿ ಸಚಿವ ಎ. ರಾಜಾ ಭಾಗವಹಿಸಿದ್ದರು.

ಬೆಂಗಳೂರು,ಜು.೧೮:ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿಲ್ಲ ಹಾಗೂ ಪ್ರಧಾನಿ ಹುದ್ದೆ ಬಗ್ಗೆ ಕಾಂಗ್ರೆಸ್ ಆಸಕ್ತಿ ಹೊಂದಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಪ್ರಧಾನಿ ಹುದ್ದೆ ಸೇರಿದಂತೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಿ ಪ್ರಧಾನಿ ನರೇಂದ್ರಮೋದಿ ಅವರು ಮತ್ತೆ ಪ್ರಧಾನಿಯಾಗುವುದನ್ನು ತಡೆಯಲು ಕಾಂಗ್ರೆಸ್ ಪಕ್ಷ ಎಲ್ಲ ತ್ಯಾಗಕ್ಕೂ ಸಿದ್ಧ ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ಆವರ ಹೇಳಿಕೆ ದೃಢಪಡಿಸಿದ್ದು, ಈ ಮೂಲಕ ಮೋದಿ ವಿರುದ್ಧ ಒಂದಾಗಿರುವ ವಿಪಕ್ಷಗಳ ನಾಯಕರುಗಳಲ್ಲಿ ಯಾರನ್ನು ಬೇಕಾದರೂ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಒಪ್ಪಿದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.ಮಹಾಮೈತ್ರಿಕೂಟ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬಂದರೆ ಪ್ರಧಾನಿ ಹುದ್ದೆ ಬೇಡಿಕೆ ಇಡಬಹುದು ಎಂಬ ವಿಪಕ್ಷಗಳ ಅನುಮಾನಗಳನ್ನೂ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮಾತಿನ ಮೂಲಕ ತೆರೆ ಎಳೆದಿದ್ದಾರೆ.ಮಹಾಮೈತ್ರಿಕೂಟ ಯಾವುದೇ ಪಕ್ಷದ ನಾಯಕರಿಗೆ ಪ್ರಧಾನಿ ಹುದ್ದೆ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿದೆ ಎಂಬ ಅಂಶವನ್ನೂ ಅವರು ತಮ್ಮ ಭಾಷಣದಲ್ಲಿ ಪ್ರತಿಪಾದಿಸುವ ಮೂಲಕ ವಿಪಕ್ಷಗಳು ಒಗ್ಗೂಡವು ಕನಸಿಗೆ ನೀರೆರೆದಿದ್ದಾರೆ.ಬೆಂಗಳೂರಿನಲ್ಲಿ ನಡೆದಿರುವ ಮಹಾಮೈತ್ರಿಕೂಟ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಮೈತ್ರಿಕೂಟ ತೀರ್ಮಾನಗಳಿಗೆ ಕಾಂಗ್ರೆಸ್ ಬದ್ಧವಾಗಿರುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ.ನಮ್ಮ ಉದ್ದೇಶ ಅಧಿಕಾರದ ಲಾಭ ಪಡೆಯಲು ಅಲ್ಲ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತ ಮತ್ತು ಸಾಮಾಜಿಕ ನ್ಯಾಯ ರಕ್ಷಿಸುವುದೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.ಮಹಾಮೈತ್ರಿ ಕೂಟದ ಪಕ್ಷಗಳಲ್ಲಿ ಭಿನ್ನಾಭಿಪ್ರಾಯವಿರುವುದನ್ನು ಒಪ್ಪಿಕೊಂಡ ಅವರು, ಇದು ರಾಜ್ಯಮಟ್ಟಗಳಲ್ಲೇ ಬಗೆಹರಿಸಿಕೊಂಡು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದಾಗಿ ಹೇಳಿದರು.ವಿಪಕ್ಷಗಳಲ್ಲಿರುವ ಭಿನ್ನಾಭಿಪ್ರಾಯ ದೊಡ್ಡ ಸಮಸ್ಯೆಯೇನಲ್ಲ, ಆದರೆ, ಶ್ರೀಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ತತ್ತರಿಸಿದ್ದಾರೆ. ದೇಶದಲ್ಲಿ ಯುವಜನರು ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿದ್ದಾರೆ. ಬಡವರು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರ ಏಳಿಗೆಗೆ ಎಲ್ಲ ವಿಪಕ್ಷಗಳು ಭಿನ್ನಾಭಿಪ್ರಾಯ ಬದಿಗಿರಿಸಿ ಒಗ್ಗಟ್ಟಿನ ಮಂತ್ರ ಜಪಿಸುತ್ತೇವೆ ಎಂದು ಹೇಳಿದರು.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೩೦೩ ಸ್ಥಾನಗಳನ್ನು ಗಳಿಸಲು ಸಾಧ್ಯವಿಲ್ಲ. ಹೀಗಾಗಿ, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಇತರ ನಾಯಕರು ರಾಜ್ಯಗಳಿಗೆ ಭೇಟಿ ನೀಡಿ ತಮ್ಮ ಹಳೆಯ ಪಕ್ಷಗಳನ್ನು ಮತ್ತೆ ಎನ್‌ಡಿಎ ತೆಕ್ಕೆಗೆ ತರಲು ಯತ್ನಿಸುತ್ತಿದ್ದಾರೆ.ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಾಮಾನ್ಯ ಉದ್ದೇಶದೊಂದಿಗೆ ಬೆಂಗಳೂರಿನಲ್ಲಿ ೨೬ ಪಕ್ಷಗಳು ಮಹಾಮೈತ್ರಿ ಕೂಟ ಸಭೆಯಲ್ಲಿ ಕಾರ್ಯತಂತ್ರ ರೂಪಿಸಿವೆ. ವಿದ್ಯುನ್ಮಾನ ಮತಯಂತ್ರದಲ್ಲಿ ದೋಷ, ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ, ಮಹಾಮೈತ್ರಿಕೂಟದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಹಾಮೈತ್ರಿಕೂಟ ಸಭೆಯಲ್ಲಿ ನಾಯಕರು ವಿಸ್ತೃತ ಸಮಾಲೋಚನೆ ನಡೆಸಿದರು.