ಪ್ರಧಾನಿ ಹುಟ್ಟುಹಬ್ಬ ಆಚರಣೆಗೆ ಸಿದ್ದತೆ

ಅರಸೀಕೆರೆ, ಸೆ. ೧೭- ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ೭೦ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಗರ ಹಾಗೂ ಗ್ರಾಮೀಣ ಮಂಡಲ ಸಿದ್ಧತೆಯಲ್ಲಿ ತೊಡಗಿದೆ ಎಂದು ತಾಲ್ಲೂಕು ಬಿಜೆಪಿ ಗ್ರಾಮೀಣ ಮಂಡಲದ ಉಪಾಧ್ಯಕ್ಷ ಅಣ್ಣಾನಾಯಕನಹಳ್ಳಿ ವಿಜಯ್‌ಕುಮಾರ್ ಹೇಳಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಸಂಕಲ್ಪ ಮಾಡಿದ್ದು ಅವರ ಆದರ್ಶ ಪಾಲಿಸುವ ಮಾದರಿಯಲ್ಲಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸೆಪ್ಟೆಂಬರ್ ೧೬ ರಿಂದ ೨೦ರ ವರೆಗೆ ಸೇವಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದಲ್ಲಿ ೭೦ ಮಿಷನರಿಗಳಿಂದ ಗ್ರಾಮೀಣ ಭಾಗ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ವಾರ್ಡ್‌ವಾರ್ ಸ್ವಚ್ಛತೆ ಮಾಡಲಾಗುವುದು. ಈ ಒಂದು ಸೇವಾ ಕಾರ್ಯದಲ್ಲಿ ಪಕ್ಷಾತೀತವಾಗಿ ಸಾರ್ವಜನಿಕರು ಸಹ ಪಾಲ್ಗೊಳ್ಳಬಹುದಾಗಿದೆ ಎಂದರು.
ಈಗಾಗಲೇ ನಗರ ವ್ಯಾಪ್ತಿಯಲ್ಲಿ ಬಿಜೆಪಿ ಕೈಗೊಂಡಿರುವ ಸ್ವಚ್ಛತಾ ಅಭಿಯಾನಕ್ಕೆ ಜೆಡಿಎಸ್ ನಾಯಕರು ವ್ಯಂಗ್ಯ ಮಾಡುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಜೆಡಿಎಸ್ ನಾಯಕರೇ ಪ್ರಶ್ನಿಸಿಕೊಳ್ಳಲಿ. ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಬೆಳೆದಿರುವ ಗಿಡಗೆಂಟೆ ಚರಂಡಿಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳು ನಗರಸಭೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ. ಅಸ್ವಚ್ಛತೆ ಎಂಬುದು ನಗರದಲ್ಲಿ ತಾಂಡವವಾಡುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಗರದ ಜನತೆ ಕಂಗೆಡುವಂತೆ ಮಾಡಿದೆ. ಹಾಗಾಗಿ ಜನತೆಯ ಆರೋಗ್ಯ ದೃಷ್ಟಿಯಿಂದ ಬಿಜೆಪಿ ಸ್ವಚ್ಛತಾ ಕಾರ್ಯ ಅಭಿಯಾನವನ್ನು ಹಮ್ಮಿಕೊಂಡಿದೆ ವಿನಃ ಪ್ರಚಾರದ ಸಿಗಲ್ಲ ಎಂದು ತಿರುಗೇಟು ನೀಡಿದರು
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅವಿನಾಶ್ ನಾಯ್ಡು, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ದಿನೇಶ್, ಅಲ್ಪಸಂಖ್ಯಾತರ ಮೋರ್ಚಾದ ನಗರ ಅಧ್ಯಕ್ಷ ವಿನೋದ್ ಜೈನ್, ಯುವ ಮೋರ್ಚಾ ನಗರ ಕಾರ್ಯದರ್ಶಿ ಮಂಜು ಕೈಕು ಮತ್ತಿತರರು ಉಪಸ್ಥಿತರಿದ್ದರು.