ಪ್ರಧಾನಿ ಸೂಚನೆಯಂತೆ ರಾಜ್ಯಪಾಲರ ನೇತೃತ್ವದಲ್ಲಿ ಸಭೆ

ಬೆಂಗಳೂರು.ಏ.೨೦- ಕೋವಿಡ್ ನಿಯಂತ್ರಣ ಸಂಬಂಧ ರಾಜ್ಯಪಾಲರು ಸರ್ವಪಕ್ಷಗಳ ಮುಖಂಡರ ಸಭೆ ಕರೆದ ತಕ್ಷಣ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬರಲಿದೆ ಎಂಬ ರೀತಿಯಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಕಿಡಿಕಾರಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚುನಾಯಿತ ಸರ್ಕಾರವಿರುವಾಗ ಈ ರೀತಿ ಹೇಳಿಕೆ ಕೊಡುವುದು ಸಮಂಜಸವಲ್ಲ. ಕೊರೊನಾದಲ್ಲಿ ರಾಜಕಾರಣ ಮಾಡುವುದು ಬೇಡ ಎಂದಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ಎಲ್ಲ ರಾಜ್ಯಗಳ ರಾಜ್ಯಪಾಲರಿಗೆ ಮಾತನಾಡಿ, ಕೊರೊನಾ ನಿಯಂತ್ರಣ ವಿಚಾರದಲ್ಲಿ ವಿರೋಧ ಪಕ್ಷಗಳು ಆಡಳಿತ ಪಕ್ಷಗಳ ಜತೆ ಚರ್ಚಿಸಿ ಸಂಯೋಜನೆ ಮಾಡಿ ಕೊರೊನಾ ನಿಯಂತ್ರಿಸಿ ಎಂದು ಸಲಹೆ ಮಾಡಿದ್ದಾರೆ. ಅದರಂತೆ ಎಲ್ಲ ರಾಜ್ಯಗಳ ರಾಜ್ಯಪಾಲರು ಸಭೆಗಳನ್ನು ನಡೆಸಿದ್ದಾರೆ ಎಂದರು.
ರಾಜ್ಯದಲ್ಲಿ ಮಾತ್ರ ಅಲ್ಲ ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನ, ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರು ಕೊರೊನಾ ನಿಯಂತ್ರಣ ಸಭೆ ನಡೆಸಿದ್ದಾರೆ. ಹಾಗೆಂದು ಆ ರಾಜ್ಯಗಳಲ್ಲೂ ರಾಜ್ಯಪಾಲರ ಆಳ್ವಿಕೆ ಜಾರಿಯಗುತ್ತದೆ ಎಂದು ಹೇಳಲು ಸಾಧ್ಯವೇ ಎಂದವರು ಡಿ.ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು. ಈ ರೀತಿಯಲ್ಲಿ ಮಾತನಾಡುವುದು ಶೋಭೆ ತರುವುದಿಲ್ಲ. ನಮ್ಮೆಲ್ಲರ ಲಕ್ಷ್ಯ ಕೋವಿಡ್ ನಿಯಂತ್ರಣದ ಕಡೆ ಇರಬೇಕು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎಂದು ಅವರು ಶಿವಕುಮಾರ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಇಡೀ ವ್ಯವಸ್ಥೆಯೇ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಫಲತೆ ಸಾಧ್ಯ. ಇದು ತಪ್ಪು ಕಂಡು ಹಿಡಿಯುವ ಸಮಯವಲ್ಲ. ಎಲ್ಲರೂ ಒಗ್ಗಟ್ಟಾಗಿ ಎಲ್ಲವನ್ನೂ ಎದುರಿಸುವ ಅಗತ್ಯವಿದೆ ಎಂದರು.
ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮಕೈಗೊಂಡಿದೆ. ಜಿಲ್ಲೆಗಳಲ್ಲಿ ವ್ಯವಸ್ಥೆ ಸರಿ ಇದೆ. ಆದರೆ, ಬೆಂಗಳೂರಿನಲ್ಲಿ ಕೆಲ ಸಮಸ್ಯೆಗಳಿವೆ ನಿಜ. ಬೆಡ್ ಕೊರತೆ, ಹಾಸಿಗೆ ಕೊರತೆಗಳನ್ನು ನಿವಾರಿಸಲು ಗಮನ ಹರಿಸಿದ್ದೇವೆ ಎಂದರು.