
ಲೇಹ್,ಆ.೨೦- ಲಡಾಕ್‌ನಲ್ಲಿ ಜನರ ಭೂಮಿಯನ್ನು ಚೀನಾ ಕಸಿದುಕೊಂಡಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ಒಂದಿಂಚು ಭೂಮಿ ಕಿತ್ತುಕೊಂಡಿಲ್ಲ ಎನ್ನುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ನೇರ ವಾಗ್ದಾಳಿ ನಡೆಸಿದ್ದಾರೆ.
ಲಡಾಕ್‌ಗೆ ಚೀನಾದ ಸೇನೆ ಅತಿಕ್ರಮಣ ಪ್ರವೇಶ ಮಾಡಿದ್ದು ಅಲ್ಲದೆ ಜನರ ಗೋಮಾಳವನ್ನು ಕಿತ್ತುಕೊಂಡಿದೆ ಎಂದು ಇಲ್ಲಿನ ಜನರು ಹೇಳಿದ್ದಾರೆ ಆದರೆ ಒಂದು ಇಂಚು ಭೂಮಿ ಕಿತ್ತುಕೊಂಡಿಲ್ಲ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಚೀನಾ ಭೂಮಿ ಕಿತ್ತುಕೊಂಡಿದೆಯೋ ಅಥವಾ ಇಲ್ಲವೇ ಎನ್ನುವುದನ್ನು ಜನರನ್ನೇ ಕೇಳಿ ಎಂದು ಅವರು ಪ್ರಶ್ನಿಸಿದ್ದಾರೆ.
ಲಡಾಕ್‌ನ ಪಾಂಗ್ ಗಾಂಗ್ ತ್ಸೆ ಸರೋವರದ ಬಳಿ ೧೪,೨೭೦ ಅಡಿ ಎತ್ತರದ ಪ್ರದೇಶದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
“ಲಡಾಕ್‌ನ ಜನರಿಂದ ಸಾಕಷ್ಟು ದೂರುಗಳು ಬಂದಿವೆ, ಕೇಂದ್ರಾಡಳಿತ ಸ್ಥಾನಮಾನದಿಂದ ಅವರು ಸಂತೋಷವಾಗಿಲ್ಲ, ಅವರಿಗೆ ರಾಜ್ಯದ ಪ್ರಾತಿನಿಧ್ಯ ಬೇಕು, ಹೆಚ್ಚಿರುವ ನಿರುದ್ಯೋಗ ಸಮಸ್ಯೆ ಪರಿಹಾರ ಬೇಕು ಎಂದು ಹೇಳಿದ್ದಾರೆ.
ಅಧಿಕಾರ ಶಾಹಿ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಆದರೆ ಇಲ್ಲಿ ಆ ಕೆಲಸ ಆಗುತ್ತಿಲ್ಲ ಎಂದು ಜನರು ಆನೇಕ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಅದಕ್ಕೆ ಪರಿಹಾರ ಬೇಕಾಗಿದೆ ಎಂದಿದ್ದಾರೆ.
ನೆನಪು ಸದಾ ಜೀವಂತ
ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನೀವು ಕಂಡ ಕನಸುಗಳು ಅಮೂಲ್ಯ ನೆನಪುಗಳಿಂದ ತುಂಬಿವೆ ಮತ್ತು ಅವುಗಳು ಸದಾ ಜೀವಂತವಾಗಿವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ತಂದೆ ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಂದೆಯನ್ನು ಸ್ಮರಿಸಿಕೊಂಡಿರುವ ಅವರು ನಿಮ್ಮ ಗುರುತು ನನ್ನ ಮಾರ್ಗ ಪ್ರತಿಯೊಬ್ಬ ಭಾರತೀಯನ ಹೋರಾಟ ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳು ಸಹಕಾರಿಯಾಗಿದೆ ಎಂದಿದ್ದಾರೆ.