
ನವದೆಹಲಿ,ಆ.7- ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ.
ಲೋಕಸಭಾ ಸದಸ್ಯ ಸ್ಥಾನವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿರುವ ರಾಹುಲ್ ಗಾಂಧಿ ಅವರು ನಾಳೆ ಅವಿಶ್ವಾಸ ನಿರ್ಣಯ ಮೇಲೆ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ..
ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ರಾಹುಲ್ ಗಾಂಧಿ ಅವರು ಮಾತನಾಡಲಿದ್ದಾರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಾಹುಲ್ ಗಾಂಧಿ ಖಂಡಿತಾ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರ ವಿಷಯದಲ್ಲಿ ಪ್ರತಿಪಕ್ಷಗಳು ಸದನದ ಒಳಗೆ ಹೇಳಿಕೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರೂ ಯಾವುದೇ ಹೇಳಿಕೆ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ವಿರುದ್ದ ಕಾಂಗ್ರೆಸ್ ಸದಸ್ಯ ರಂಜನ್ ಗೊಗೈಯ್ ಅವರು ವಿರೋಧ ಪಕ್ಷಗಳ ಮೈತ್ರಿಕೂಟದ ಬೆಂಬಲದೊಂದಿಗೆ ಅವಿಶ್ವಾಸ ನಿರ್ಣಯ ಮಂಡಿಸಿದ್ಧಾರೆ.
ಆಗಸ್ಟ್ 10 ರಂದು ವಿರೋಧ ಪಕ್ಷಗಳ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡಲಿದ್ದಾರೆ.
ನಿತೀಶ್, ತೇಜಸ್ವಿ ಅಭಿನಂದನೆ:
ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮತ್ತೆ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಮರುಸ್ಥಾಪಿಸಿದ ಲೋಕಸಭಾ ಸಚಿವಾಲಯದ ಕ್ರಮವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವಾಗತಿಸಿದ್ದು ರಾಹುಲ್ ಗಾಂಧಿ ಅವರನ್ನು ಅಭಿನಂಧಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ಒಗ್ಗೂಡುತ್ತಿವೆ, ಆದ್ದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮಂದಿ ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ
ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಅವರೂ ಕೂಡ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದ್ದಾರೆ.
ಲಾಲು ಯಾದವ್ ಅವರನ್ನು ಭೇಟಿ ಮಾಡಲು ಬಂದಾಗ ನಾನು ಅವರನ್ನು ಭೇಟಿ ಮಾಡಿದ್ದೇನೆ. ನಾವು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಮತ್ತು ಅದನ್ನು ಗೆಲ್ಲುತ್ತೇವೆ ಎಂದು ಅವರು ತಿಳಿಸಿದ್ದಾರೆ.