ಪ್ರಧಾನಿ ರೋಡ್ ಶೋ ಗೆಲುವಿನ ಉತ್ಸಾಹ ಹೆಚ್ಚಿಸಿದೆ ಗೋಪಾಲಯ್ಯ

ಬೆಂಗಳೂರು,ಮೇ೬:ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರಿನಲ್ಲಿಂದು ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಕ್ಷೇತ್ರದಲ್ಲೂ ಸಂಚರಿಸಿ ಮತಬೇಟೆ ನಡೆಸಿದ ವೇಳೆ ಕಾಮಾಕ್ಷಿಪಾಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಕೆ. ಗೋಪಾಲಯ್ಯ ಅವರು ಪ್ರಧಾನಿಯವರಿಗೆ ಪುಷ್ಪ ವೃಷ್ಠಿಯ ಮೂಲಕ ಸ್ವಾಗತಿಸಿ ಧನ್ಯವಾದ ಹೇಳಿದರು.
ಪ್ರಧಾನಿಯವರು ಕಾಮಾಕ್ಷಿ ಪಾಳ್ಯ ಕ್ಷೇತ್ರದ ಬಸವೇಶ್ವರನಗರ ಹಾಗೂ ಶಂಕರಮಠ ರಸ್ತೆಯಲ್ಲಿ ಸಂಚರಿಸಿದ ಸಂದರ್ಭದಲ್ಲಿ ಸಚಿವ ಗೋಪಾಲಯ್ಯ ಅವರು ಪ್ರಧಾನಿಗಳನ್ನು ಅಪಾರ ಜನಸ್ತೋಮದೊಂದಿಗೆ ಸ್ವಾಗತಿಸಿದರು.
ಪ್ರಧಾನಿಗಳ ಸ್ವಾಗತಕ್ಕೆ ಕಾಮಾಕ್ಷಿಪಾಳ್ಯ ಕ್ಷೇತ್ರದ ಜನತೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು, ಪ್ರಧಾನಿ ಮೋದಿ ಅವರು ಬರುತ್ತಿದ್ದಂತೆ ಜೈಕಾರದ ಘೋಷಣೆಗಳನ್ನು ಹಾಕಿದರು. ಪ್ರಧಾನಿ ಮೋದಿ ಅವರೂ ಸಹ ಸಚಿವ ಗೋಪಾಲಯ್ಯ ಹಾಗೂ ಜನಸ್ತೋಮದತ್ತ ಹರ್ಷದಿಂದ ಕೈಬೀಸಿದರು.
ಪ್ರಧಾನಿಯವರ ರೋಡ್ ಶೋ ಹೆಚ್ಚಿನ ಬಲ ತಂದಿದೆ. ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಈ ರೋಡ್ ಶೋ ನೆರವಾಗಲಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.
ಬಿಜೆಪಿಯ ದೊಡ್ಡ ಶಕ್ತಿಯಾಗಿರುವ ಮೋದಿ ಅವರು ತಮ್ಮ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿರುವುದು ಸಂತಸ ತಂದಿದೆ. ಇದರಿಂದ ನನಗೆ ಹಾಗೂ ಕ್ಷೇತ್ರದ ಕಾರ್ಯಕರ್ತರಿಗೆ ಹೆಚ್ಚಿನ ಹುರುಪು-ಹುಮ್ಮಸ್ಸು ತಂದಿದೆ ಎಂದರು.
ಪ್ರಧಾನಿಯವರ ಪ್ರಚಾರದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ ಅವರು, ಪ್ರಧಾನಿಯವರ ರೋಡ್ ಶೋ ಗೆಲುವಿನ ಉತ್ಸಾಹವನ್ನು ಹೆಚ್ಚಿಸಿದೆ ಎಂದರು.

ಪ್ರಧಾನಿ ನರೇಂದ್ರಮೋದಿ ಅವರು ಕಾಮಾಕ್ಷಿಪಾಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು ಪ್ರಧಾನಿಗಳಿಗೆ ಪುಷ್ಪವೃಷ್ಠಿ ಮಾಡುವ ಮೂಲಕ ಸ್ವಾಗತಿಸಿದರು.