ಪ್ರಧಾನಿ ರೇಸ್‌ನಲ್ಲಿ ರಿಷಿ ಮುನ್ನಡೆ

ಲಂಡನ್, ಜು.೧೯- ಭಾರತ ಮೂಲದ ರಿಷಿ ಸುನಾಕ್ ಅವರು ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ನಡೆದ ಮೂರನೇ ಸುತ್ತಿನ ಚುನಾವಣೆಯಲ್ಲೂ ಮುನ್ನಡೆ ಕಾಯ್ದುಕೊಂಡಿದ್ದು, ರೇಸ್‌ನಲ್ಲಿರುವ ಅಂತಿಮ ನಾಲ್ಕು ಮಂದಿಯ ಪೈಕಿ ಒಬ್ಬರಾಗಿ ಉಳಿದಿದ್ದಾರೆ.
ಈ ನಡುವೆ ಕನ್ಸರ್ವೇಟಿವ್ ಪಕ್ಷದ ಸದಸ್ಯರ ನಡುವೆ ನಡೆದ ಚುನಾವಣೆಯಲ್ಲಿ ಕನಿಷ್ಠ ಮತಗಳನ್ನು ಪಡೆದ ಟಾಮ್ ಟುಗೆಂದತ್ ಇದೀಗ ಸ್ಪರ್ಧೆಯಿಂದ ಹೊರಬಿದಿದ್ದಾರೆ. ಮಾಜಿ ಹಣಕಾಸು ಸಚಿವರಾಗಿರುವ ರಿಶಿ ಸುನಾಕ್ ಮೂರನೇ ಸುತ್ತಿನಲ್ಲಿ ೧೧೫ ಮತಗಳನ್ನು ಪಡೆದಿದ್ದಾರೆ. ವ್ಯಾಪಾರ ಖಾತೆ ಸಚಿವ ಪೆನ್ನಿ ಮಾರ್ಡಂಟ್ ೮೨ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವಿದೇಶಾಂಗ ಕಾರ್ಯದರ್ಶಿ ಲಿಝ್ ಟ್ರಸ್ ೭೧ ಹಾಗೂ ಮಾಜಿ ಸಚಿವ ಕೆಮಿ ಬಡೇನಾಚ್ ೫೮ ಮತಗಳೊಂದಿಗೆ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಿಂದಿನ ಸುತ್ತಿನಲ್ಲಿ ೩೨ ಮತಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದ ಹೌಸ್ ಆಫ್ ಕಾಮನ್ಸ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಟಾಮ್ ಟುಗೆಂದತ್ ೩೧ ಮತಗಳನ್ನು ಪಡೆದು ಸ್ಪರ್ಧೆಯಿಂದ ನಿರ್ಗಮಿಸಿದರು. ಹಿಂದಿನ ಸುತ್ತಿಗಿಂತ ೧೪ ಮತಗಳನ್ನು ರಿಷಿ ಸುನಾಕ್ ಹೆಚ್ಚುವರಿಯಾಗಿ ಪಡೆದಿದ್ದರೆ, ೨ನೇ ಸುತ್ತಿನಲ್ಲಿ ೮೩ ಮತ ಪಡೆದಿದ್ದ ಮಾರ್ಡಂಟ್ ಒಂದು ಮತ ಕಳೆದುಕೊಂಡಿದ್ದಾರೆ. ಟ್ರಸ್ ಅವರ ಮತ ಗಳಿಕೆ ೪೯ರಿಂದ ೬೪ಕ್ಕೇರಿದೆ. ಕನ್ಸರ್ವೇಟಿವ್ ಪಕ್ಷದ ಸಹೋದ್ಯೋಗಿಗಳಿಂದ ಮ್ಯಾಜಿಕ್ ಸಂಖ್ಯೆ ಎನಿಸಿದ ೧೨೦ ಮತಗಳನ್ನು ಗಳಿಸಿದ ಅಭ್ಯರ್ಥಿ ಟೋರಿ ಸದಸ್ಯತ್ವದ ಮತದಾನಕ್ಕಾಗಿ ನಡೆಯುವ ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯುವ ಇಬ್ಬರ ಪೈಕಿ ಒಬ್ಬರಾಗುತ್ತಾರೆ. ಕೊನೆಯ ಕೆಲ ಸುತ್ತಿನ ಮತದಾನ ಈ ವಾರ ನಡೆಯಲಿದೆ.