ಪ್ರಧಾನಿ ಮೋದಿ ಸರ್ಕಾರಕ್ಕೆ 7 ವರ್ಷ: ರಾಜ್ಯದ 50,000 ಬೂತ್‍ಗಳ ಮೂಲಕ ಕೋವಿಡ್ ತಡೆ ಸೇವಾ ಕಾರ್ಯ

ಕಲಬುರಗಿ,ಮೇ.29: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ ಸರ್ಕಾರವು ಭಾನುವಾರದಂದು ಏಳನೇ ವರ್ಷ ಹಾಗೂ ಎರಡನೇ ಅವಧಿಯಲ್ಲಿನ ಎರಡನೇ ವಷ ಪೂರ್ತಿಗೊಳ್ಳಲಿದ್ದು, ದೇಶಾದ್ಯಂತ ಕೋವಿಡ್ ಎರಡನೇ ಸೋಂಕಿನ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯನ್ನು ಮಾಡದೇ ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ಸೇವಾ ಕಾರ್ಯಗಳನ್ನು ರಾಜ್ಯದ 50,000 ಬೂತ್‍ಗಳಲ್ಲಿ ಸೇವಾ ಹೀ ಸಂಘಟನೆ-2.0 ಅಡಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರೂ ಆದ ಜಿಲ್ಲಾ ಸಹಕಾರ ಬ್ಯಾಂಕ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಂಘಟನೆಯು ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಹಾಗೂ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಮಾಡಿದೆ ಎಂದರು.
ಜಿಲ್ಲೆಯಲ್ಲಿಯೂ ಸಹ ಭಾನುವಾರದಂದು 1500 ಬೂತ್‍ಗಳ ಮೂಲಕ ಸೇವಾ ಕಾರ್ಯಗಳನ್ನು ಆರಂಭಿಸಲಾಗುವುದು. ಪ್ರತಿ ಬೂತ್‍ನಲ್ಲಿ ಕನಿಷ್ಠ 50 ಮಾಸ್ಕ್‍ಗಳನ್ನು ವಿತರಿಸುವುದು, ಸಂತ್ರಸ್ತರಿಗೆ ದಿನಸಿ, ಸ್ಯಾನಿಟೈಜರ್, ಸೋಪು ವಿತರಣೆಯೊಂದಿಗೆ, ಕಾರ್ಯಕರ್ತರೇ ಸ್ವಯಂ ಸಂಗ್ರಹಿಸಿದ ಹಣಕಾಸಿನ ನೆರವೂ ಸಹ ನೀಡಲಾಗುವುದು ಎಂದು ಅವರು ಹೇಳಿದರು.
ಕೊರೋನಾ ಕುರಿತು ಜಾಗೃತಿ ಮೂಡಿಸಲು ಡಂಗುರ ಸಾರುವುದು, ಆಟೋ ಮೈಕ್ ಮೂಲಕ ಪ್ರಚಾರ, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ಮಾಡಲಾಗುವುದು. ಅಗತ್ಯ ಇರುವವರಿಗೆ ಔಷಧಿ, ಆಮ್ಲಜನಕ ಮುಂತಾದವುಗಳನ್ನು ಒದಗಿಸಲಾಗುವುದು. ವೈದ್ಯರ ದೂರವಾಣಿ ಕ್ರಮಾಂಕ ಕೊಟ್ಟು ಕೋವಿಡ್ ಪೀಡಿತರಿಗೆ, ನಿರಾಸೆಗೊಂಡವರಿಗೆ, ಸೂಕ್ತ ವೈದ್ಯಕೀಯ ಸಲಹೆ ಹಾಗೂ ಸಲಹೆ, ಸಾಂತ್ವನ, ಧೈರ್ಯ ಹೇಳುವಂತಹ ಕೆಲಸವನ್ನು ಕಾರ್ಯಕರ್ತರು ಮಾಡುವರು ಎಂದು ಅವರು ತಿಳಿಸಿದರು.
ಕಷಾಯ ತಯಾರಿಸಿ ಹಂಚಿಕೆ, ಕಷಾಯ ಪುಡಿ ತಯಾರಿಸಿ ವಿತರಣೆ ಮತ್ತು ಕಷಾಯ ಪುಡಿ ಮಾಡುವ ವಿಧಾನವನ್ನು ಜನರಿಗೆ ತಿಳಿಸುವುದು, ಬಿಸಿ ಹಬೆಯ ಕೇಂದ್ರ ಮಾಡುವುದು, ಸಿದ್ದಪಡಿಸಿದ ಆಹಾರ ಪೊಟ್ಟಣ ನೀಡುವುದು, ಸಸಿ ನೆಡುವ ಕಾರ್ಯಕ್ರಮ, ರಕ್ತದಾನ, ಮನೆಯವರೆಲ್ಲ ಸೇರಿ ಮಾವು, ಹಲಸು, ಬೇವು, ಹೊಂಗೆ, ಹಣಸೆ ಬೀಜಗಳನ್ನು ಬಳಸಲು ಬೀಜದ ಉಂಡೆಗಳನ್ನು ತಯಾರಿಸುವುದು, ಅಕ್ಕಪಕ್ಕದ ಮಕ್ಕಳಿಗೆ ದೇಶಭಕ್ತಿಗೀತೆ, ಕಥೆ, ಭಜನೆ ಹೇಳಿಕೊಡುವುದು, ಲಸಿಕಾ ಕಾರ್ಯ ಯಶಸ್ವಿಯಾಗುವಂತೆ ನೋಡಿಕೊಳ್ಳುವುದು, ವೈದ್ಯರು, ಆಶಾ ಕಾರ್ಯಕರ್ತೆಯರೂ ಸೇರಿದಂತೆ ಕೊರೋನಾ ವಾರಿಯರ್ಸ್‍ಗಳಿಗೆ ದೂರವಾಣಿ ಮೂಲಕ ಧನ್ಯವಾದ ಹೇಳುವುದು, ಶವಸಂಸ್ಕಾರ ಮುಂತಾದ ಕೋವಿಡ್ ಸೇವಾ ಕಾರ್ಯಗಳಲ್ಲಿ ನಿರಂತರ ತೊಡಗುವ ಕಾರ್ಯಕರ್ತರಿಗೆ ಜನಪ್ರತಿನಿಧಿಗಳು ಮತ್ತು ಪಕ್ಷದ ಪ್ರಮುಖರಿಂದ ಮೆಚ್ಚುಗೆಯ ದೂರವಾಣಿ ಕರೆ ಮಾಡುವುದು ಮುಂತಾದ ಕಾರ್ಯಕ್ರಮಗಳು ನೆರವೇರಲಿವೆ ಎಂದು ಅವರು ಹೇಳಿದರು.
ಎರಡನೇ ಕೋವಿಡ್ ಅಲೆಯನ್ನು ಇಷ್ಟೊಂದು ವೇಗವಾಗಿ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸೋಂಕು ಎದುರಿಸಲು ಸಮರ್ಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಬೆಡ್‍ಗಳು, ಆಮ್ಲಜನಕ, ಲಸಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ಯುದ್ದೋಪಾದಿಯಲ್ಲಿ ಕೈಗೊಂಡಿದ್ದು, ಜಗತ್ತಿನ ಎಲ್ಲ ರಾಷ್ಟ್ರಗಳ ಮೆಚ್ಚುಗೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಪತ್ರಕರ್ತರಿಗೂ ವಿಶೇಷ ಯೋಜನೆ: ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಲಸಿಕೆಯನ್ನು ಪತ್ರಕರ್ತರಿಗೆ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದು ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಹೇಳಿದರು.
ಪತ್ರಕರ್ತರಿಗಾಗಿಯೇ ಇನ್ನೆರಡ್ಮೂರು ದಿನಗಳಲ್ಲಿ ವಿಶೇಷ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ನಗರ ಜಿಲ್ಲಾ ಮಾಧ್ಯಮ ಪ್ರಮುಖ ಅರುಣ್ ಕುಲಕರ್ಣಿ, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.