
ಕಲಬುರಗಿ,ಏ.26: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಟೀಕಿಸುತ್ತಿರುವವರು ಒಂದು ಪರಿವಾರದ ಗುಲಾಮರು ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕಿಡಿಕಾರಿದರು.
ನಗರದ ಬಿಜೆಪಿ ಕಚೇರಿಯಲ್ಲಿನ ಮಾಧ್ಯಮ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ನಂತರ ಅತೀ ಹೆಚ್ಚು ಅಧಿಕಾರ ಮಾಡಿದ ಕಾಂಗ್ರೆಸ್ ಇಡೀ ದೇಶವನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಕಳೆದ 8 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಮೂಲಕ ಜಾಗತಿಕ ಮಟ್ಟದಲ್ಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಹೆಸರನ್ನು ಬಳಸಿಕೊಳ್ಳುವುದರದಲ್ಲಿ ಯಾವ ತಪ್ಪಿದೆ? ಎಂದು ಪ್ರಶ್ನಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಮೇಲೆ ಎದುರಿಸುತ್ತಿದೆ. ಕರ್ನಾಟಕದಲ್ಲಿ ಆ ಪಕ್ಷದಲ್ಲಿ ನಾಯಕರು ಇಲ್ಲವೇ? ಎಂಬ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಅವರೆಲ್ಲ ಒಂದು ಪರಿವಾರದ ಗುಲಾಮರು. ಅವರಿಗೆ ಪ್ರಧಾನಿಯನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಬಿಜೆಪಿ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಂಗ್ರೆಸ್ಸಿನಲ್ಲಿ ದಿ. ವೀರೇಂದ್ರ ಪಾಟೀಲ್ ಅವರನ್ನು ಕಡೆಗಣಿಸಿದ ರೀತಿಯಲ್ಲಿಯೇ ಕಡೆಗಣಿಸಲಾಗಿದೆ ಎಂಬ ಸುದ್ದಿಗಾರರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೂ, ನಮಗೂ ಹೋಲಿಕೆ ಮಾಡಬೇಡಿ. ಕಾಂಗ್ರೆಸ್ ಪಕ್ಷದಲ್ಲಿ ದಿ. ವೀರೇಂದ್ರ ಪಾಟೀಲ್ ಅವರನ್ನು ಅನಾರೋಗ್ಯದ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಇದು ನಾಚಿಕೆಗೇಡಿತನದ ಸಂಗತಿಯಾಗಿದೆ. ಅಂತವರು ಬಿಜೆಪಿಯ ಕುರಿತು ಟೀಕೆ ಮಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಈಗಲೂ ಸಹ ಅವರಿಗೆ ಕೊಡಬೇಕಾದ ಗೌರವವನ್ನು ನಾವು ಕೊಡುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿಯೂ ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಸಹ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಚುನಾವಣೆಯ ನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಂತೆ ಕರ್ನಾಟಕದಲ್ಲಿಯೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡಬೇಕಾಗಿದೆ ಎಂದು ಹೇಳಿದ ಅವರು, ಅದಕ್ಕಾಗಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಗ್ರ ಅಭಿವೃದ್ಧಿಯನ್ನು ಬಯಸುತ್ತಾರೆ. ಆ ಹಿನ್ನೆಲೆಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ದೇಶದಲ್ಲಿ ಸುಮಾರು 116 ಜಿಲ್ಲೆಗಳು ಹಿಂದುಳಿದಿವೆ. ಅದರಲ್ಲಿ ಕಲಬುರ್ಗಿಯೂ ಸಹ ಒಂದಾಗಿದೆ. ಇಂತಹ ಹಿಂದುಳಿದ ಜಿಲ್ಲೆಗಳು ಉಳಿದ ಜಿಲ್ಲೆಗಳಿಗೆ ಸಮಾನವಾಗಿ ಅಭಿವೃದ್ಧಿ ಹೊಂದಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ವಿಡಿಯೋ ಸಂವಾದ ಮಾಡುತ್ತಾರೆ. ಕೇಂದ್ರದ ಯೋಜನೆಗಳು ಆ ಜಿಲ್ಲೆಗಳಿಗೆ ತಲುಪುತ್ತಿರುವ ಕುರಿತು ಜಿಲ್ಲಾಧಿಕಾರಿಗಳನ್ನು ವಿಚಾರಿಸುವರು ಎಂದು ಅವರು ಹೇಳಿದರು.
ತೆಲಂಗಾಣ್, ವಿದರ್ಭಾ ರಾಜ್ಯಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿದೆ ಎಂಬುದನ್ನು ಅಲ್ಲಗಳೆದ ಅವರು, ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎನ್ನುವ ಬೇಡಿಕೆಗೆ ಖಚಿತ ಉತ್ತರ ಕೊಡಲಿಲ್ಲ.
ಕೇಂದ್ರದ ಬಜೆಟ್‍ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಒದಗಿಸಲಾಗಿದೆ. ಆ ರೀತಿಯಲ್ಲಿ ಕರ್ನಾಟಕದ ಜೊತೆಗೆ ಭಾರತವನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಎಂದು ಅವರು ಗುಣಗಾನ ಮಾಡಿದರಲ್ಲದೇ 2047ರ ವೇಳೆಗೆ ಭಾರತವು ಅಭಿವೃಧ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.
ಭಾರತವು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ಇನ್ನೊಂದು ಕಡೆ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಕಡಿಮೆ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವರು, ಭಾರತದ ಆರ್ಥಿಕ ಬೆಳವಣಿಗೆಯೂ ಸಹ ಮಾನವ ಅಭಿವೃದ್ಧಿ ಸೂಚ್ಯಾಂಕಕ್ಕೆ ಪೂರಕವಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡ ಕುಟುಂಬಗಳಿಗೆ ಆಯುಷ್ಮಾನ್ ಆರೋಗ್ಯ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ಮನೆ, ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನು ಉದ್ಯೋಗ ಸೃಷ್ಟಿಗೆ ಸ್ಟಾರ್ಟ್‍ಪ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದು ಮಾನವ ಅಭಿವೃದ್ಧಿಗೆ ಕೈಗೊಳ್ಳಲಾದ ಕಾರ್ಯಕ್ರಮಗಳಾಗಿವೆ ಎಂದು ವಿವರಿಸಿದರು.
ಇನ್ನು ತೈಲ ಬೆಲೆಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರವು ಸಕಾಲದಲ್ಲಿ ನಿಯಂತ್ರಣ ಮಾಡುತ್ತಿದೆ. ಉಕ್ರೇನ್ ಯುದ್ಧದ ನಂತರ ತೈಲ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಆದಾಗ್ಯೂ, ಕೇಂದ್ರದಲ್ಲಿನ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಸುಂಕವನ್ನು ಕಡಿತಗೊಳಿಸುವ ಮೂಲಕ ತೈಲ ಬೆಲೆ ಹೆಚ್ಚಳವನ್ನು ನಿಯಂತ್ರಣ ಮಾಡುತ್ತಿದೆ ಎಂದು ಅವರು ಹೇಳಿದರು.
ಬ್ಯಾಂಕುಗಳ ವಿಲೀನಿಕರಣದಿಂದ ಹಲವು ಬ್ಯಾಂಕುಗಳಲ್ಲಿ ತಾಂತ್ರಿಕ ಸಮಸ್ಯೆಗಳಾಗುತ್ತಿದ್ದು, ಅದನ್ನು ಪರಿಹರಿಸುವಲ್ಲಿ ಕ್ರಮ ಕೈಗೊಳ್ಳದೇ ಇರುವುದರಿಂದ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಇದು ಕೇಂದ್ರದ ನೀತಿಯೇ ಕಾರಣ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಅಂತಹ ಸಮಸ್ಯೆಗಳನ್ನು ಆಯಾ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಪರಿಹರಿಸಿಕೊಳ್ಳುವುದಕ್ಕೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ವಿಳಂಬಕ್ಕೆ ಕ್ಷಮೆ ಕೇಳಿದ ಸಚಿವೆ: ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಿಂದ ವಿಮಾನ ಹೊರಡುವುದು ವಿಳಂಬವಾಯಿತು. ಇದರಿಂದಾಗಿ ಪತ್ರಿಕಾಗೋಷ್ಠಿಗೆ ಸುಮಾರು ಎರಡು ಗಂಟೆಗಳ ತಡವಾಗಿ ಆಗಮಿಸಿರುವೆ. ಅದಕ್ಕಾಗಿ ಕ್ಷಮೆ ಕೇಳುವುದಾಗಿ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಜಿಲ್ಲಾ ಗ್ರಾಮಾಂತರ ಘಟಕದ ಕಾರ್ಯಾಧ್ಯಕ್ಷ ಅಶೋಕ್ ಬಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಟೆಂಗಳಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಚಂದಮ್ಮ ಪಾಟೀಲ್, ಜಿಲ್ಲಾ ಗ್ರಾಮಾಂತರ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ಬಿರಾದಾರ್, ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಶೋಭಾ ಬಾಗೇವಾಡಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಭಾಗೀರಥಿ ಗುನ್ನಾಪುರ, ಶ್ರೀಮತಿ ಸುವಣಾ ವಾಡೆ ಮುಂತಾದವರು ಉಪಸ್ಥಿತರಿದ್ದರು.