ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆಎಲ್ಲೆಡೆ ಸಿಸಿಟಿವಿ, ಖಾಕಿ ಪಡೆ ಕಣ್ಗಾವಲು ೧.೫೦ ಲಕ್ಷ ಜನರಿಗೆ ಆಸನ ವ್ಯವಸ್ಥೆ


ವಿಜಯನಗರ, ಏ.28: ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸಪೇಟೆಯಲ್ಲಿ ಭಾನುವಾರ ಸಂಜೆ 5 ಗಂಟೆಗೆ ಹಮ್ಮಿಕೊಂಡಿರುವ `ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ಕ್ಕೆ ಜಿಲ್ಲಾ ಕ್ರೀಡಾಂಗಣ ನವ ವಧುವಿನಂತೆ ಸಿಂಗಾರಗೊಂಡಿದೆ.
ಮೈದಾನದಲ್ಲಿ ಬೃಹತ್ ಗಾತ್ರದ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಸುಮಾರು 80/100 ಅಡಿ ವೇದಿಕೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಿ.ಶ್ರೀರಾಮುಲು, ಕೊಪ್ಪಳ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ರಾಯಚೂರು ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಪಕ್ಷದ ಜಿಲ್ಲಾಧ್ಯಕ್ಷರು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖರು ಸೇರಿದಂತೆ 48 ಜನರು ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ವೇದಿಕೆ ಮುಂಭಾಗದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಆಸನಕ್ಕಾಗಿ ಸುಮಾರು ೧.೫೦ ಲಕ್ಷ  ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಸಭಿಕರಿಗೆ ಕುಡಿಯುವ ನೀರು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ  ಸೌಲಭ್ಯವನ್ನೂ ಒದಗಿಸಿದೆ ಎಂದು ಪಕ್ಷದ ಮೂಲಗಳು  ಮಾಹಿತಿ ನೀಡಿವೆ.
ಕಾರ್ಯಕ್ರಮಕ್ಕೆ ಬಿಗಿ ಭದ್ರತೆ:
ಬಿಜೆಪಿ ಬೃಹತ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರು ಹಾಗೂ ಲಕ್ಷಾಂತರ ಜನ ಸಾಮಾನ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಜಿಲ್ಲಾ ಕ್ರೀಡಾಂಗಣ ಹಾಗೂ ನಗರದ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿದ್ದು, ನಾಲ್ವರು ಎಸ್ಪಿ, ನಾಲ್ವರು ಹೆಚ್ಚುವರಿ ಎಸ್ಪಿ, 17 ಜನ ಡಿಎಸ್ಪಿ, 37 ಸಿಪಿಐ, 73 ಪಿಎಸ್‌ಐ, 113 ಎಎಸ್‌ಐ, 1100 ಎಚ್‌ಸಿ/ ಪಿಸಿ, 50೦ ಗೃಹ ರಕ್ಷಕ ದಳ ಸಿಬ್ಬಂದಿ, 8 ಎಎಸ್‌ಸಿ ತಂಡ, 4 ಕೆಎಸ್‌ಆರ್‌ಪಿ, 5 ಡಿಎಆರ್ ತುಕಡಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಜೊತೆಗೆ ಆಯ್ದ ಭಗದಲ್ಲಿ ಒಟ್ಟು 2೦೦ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ತಿಳಿಸಿದರು.