ಪ್ರಧಾನಿ ಮಂತ್ರಿಗಳ ಆಗಮನ; ಮಾರ್ಗ ಬದಲಾವಣೆ


ಬಳ್ಳಾರಿ,ಮೇ 04: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು, ಪಕ್ಷದ ಕಾರ್ಯಕ್ರಮ ನಿಮಿತ್ತ ಮೇ 05 ರಂದು ಬಳ್ಳಾರಿಗೆ ಆಗಮಿಸಲಿದ್ದು, ನಗರದ ಕಪ್ಪಗಲ್ ರಸ್ತೆಯ ಸತ್ಯಂ ಕಾಲೇಜು ಮುಂಭಾಗದ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕೆಲವೆಡೆ ವಾಹನಗಳ ಸಂಚಾರ ಹಾಗೂ ಮಾರ್ಗ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.  ಹೀಗಾಗಿ ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಸಂಚಾರದ ಆಡಚಣೆಯಾಗದಂತೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಪ್ಪಗಲ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ ಅನ್ಯ ಮಾರ್ಗದ ಮೂಲಕ ಸಂಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮ ದಿನದಂದು, ಬೆಳಗ್ಗೆ 07 ರಿಂದ ಸಂಜೆ 06 ರವರೆಗೆ ಸಿರಿವಾರ, ಕಪ್ಪಗಲ್ ಗ್ರಾಮದಿಂದ ಬಳ್ಳಾರಿ ನಗರಕ್ಕೆ ಬರುವ ಮತ್ತು ಹೋಗುವ ಹಾಗೂ ಬಳ್ಳಾರಿ ನಗರದಿಂದ ಸಿರಿವಾರ, ಕಪ್ಪಗಲ್ ಗ್ರಾಮಕ್ಕೆ ಹೋಗುವ ಮತ್ತು ಬರುವ ಸಾರ್ವಜನಿಕರ ಎಲ್ಲಾ ವಾಹನಗಳಿಗೆ ಬಳ್ಳಾರಿ ನಗರದ ಕಪ್ಪಗಲ್ ರಸ್ತೆಯ ಮೂಲಕ ವಾಹನ ಸಂಚಾರವನ್ನು ನಿಬರ್ಂಧಿಸಿ, ಬದಲಿ ಮಾರ್ಗವಾದ ಕೆ.ಇ.ಬಿ ಸರ್ಕಲ್, ಸಂಗನಕಲ್ ಬೈಪಾಸ್, ಸಿರಿವಾರ ಕ್ರಾಸ್ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಮ್ಯಾಕ್ಸ್ ಕ್ರಾಸ್‍ನಿಂದ ಕಪ್ಪಗಲ್ ರಸ್ತೆಯ ಬ್ರಹ್ಮಯ್ಯ ದೇವಸ್ಥಾನದ ಕಾಲುವೆಯವರೆಗೆ ರಸ್ತೆಯ ಎರಡು ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಮಾಡುವುದನ್ನು ನಿಬರ್ಂಧಿಸಲಾಗಿದೆ.
ಭದ್ರತಾ ಹಿತದೃಷ್ಟಿಯಿಂದ ಕಾರ್ಯಕ್ರಮ ಪ್ರದೇಶದ ಸುತ್ತಲೂ 05 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತಿತರೆ ಸುಲಭವಾಗಿ ಹಾಗೂ ಕ್ಷಣಾರ್ಧದಲ್ಲಿ ದಹಿಸಬಲ್ಲ ವಾಹನ ಸಾಗಾಣಿಕೆಯನ್ನು ಹಾಗೂ ನಿಲುಗಡೆ ಮಾಡುವುದನ್ನು ನಿಷೇಧಿಸಿದೆ. ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಯಾವುದೇ ರೀತಿಯ ಡ್ರೋಣ್ ಹಾರಾಟ ಮಾಡದಂತೆ ರೆಡ್ ಜೋನ್ ಪ್ರದೇಶವನ್ನಾಗಿ ಘೋಷಿಸಿದ್ದು,  ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.